ಹಾವೇರಿ: ‘ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಗಂಭೀರವಾಗಿ ಸಮೀಕ್ಷೆ ನಡೆಸುತ್ತಿಲ್ಲವೆಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅವರಿಗೆ ಕಾಲವೇ ಉತ್ತರ ನೀಡಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಚಿವ ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳು ಒತ್ತಾಯ ಮಾಡುವುದು ಸಹಜ. ಎಲ್ಲರಿಗೂ ಸಚಿವ ಆಗಬೇಕೆಂಬ ಆಸೆ ಇರುತ್ತದೆ. ನಮ್ಮ ಪಕ್ಷದಲ್ಲಿ ಹಿರಿಯರು ಹೆಚ್ಚಿದ್ದಾರೆ. ಅದರಲ್ಲಿ ಸಚಿವರು ಯಾರಾಗಬೇಕು ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ’ ಎಂದು ತಿಳಿಸಿದರು.
‘ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ನ್ಯಾಯಾಲಯವೇ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಇದರಲ್ಲಿ ರಾಜಕೀಯ ಮಾಡಬಾರದು’ ಎಂದು ಹೇಳಿದರು.
‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರದಲ್ಲೂ ಬಿಜೆಪಿ ವಿರೋಧ ಮಾಡುತ್ತಿದೆ. ಬಿಜೆಪಿಯವರು ಮತ ಬ್ಯಾಂಕ್‌ಗಾಗಿ ಪ್ರತಿಯೊಂದನ್ನೂ ವಿರೋಧಿಸುತ್ತಾರೆ. ದಸರಾ ಉದ್ಘಾಟನೆ ಯಾರು ಮಾಡಬೇಕೆಂಬುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ. ಸಂವಿಧಾನ ಬೇಡ ಎನ್ನುತ್ತಿರುವವರೇ ಇಂದು ದೊಡ್ಡ ಕುರ್ಚಿಯಲ್ಲಿ ಕುಳಿತಿದ್ದಾರೆ’ ಎಂದರು.
‘ಕಾಂಗ್ರೆಸ್ ಸರ್ಕಾರ, ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ ಎಂಬುದಾಗಿ ಬಿಜೆಪಿ ಆರೋಪಿಸುತ್ತಿದೆ. ಆದರೆ, ಮುಸ್ಲಿಮರೂ ಗುಡಿಸಲಿನಲ್ಲಿ ಇದ್ದಾರೆ. ಅವರಿಗೂ ಕುಡಿಯಲು ನೀರಿಲ್ಲ. ಶೌಚಾಲಯವಿಲ್ಲ. ನಾವು ಅವರಿಗೆ ಬಹಳ ದೊಡ್ಡದಾಗಿ ಏನೂ ಮಾಡಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರನ್ನು ಬಂಧಿಸಲಾಗಿದೆ. ಯಾರನ್ನೂ ಹೆಚ್ಚು ಓಲೈಕೆ ಮಾಡಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.