ADVERTISEMENT

ಜಾತಿಗಳ ಸ್ಥಿತಿಗತಿ: ಸರ್ಕಾರಕ್ಕೆ ವರದಿ ಸಲ್ಲಿಕೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 2:22 IST
Last Updated 24 ಜೂನ್ 2022, 2:22 IST
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯಿತು 
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯಿತು    

ಹಾವೇರಿ: ‘ವೀರಶೈವ ಲಿಂಗಾಯತ ಸಮುದಾಯದ ವಿವಿಧ ಒಳಪಂಗಡಗಳು ಕೇಂದ್ರ ಹಾಗೂ ರಾಜ್ಯದ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ನಿಗದಿತ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಆಗ್ರಹಿಸಿರುವ ಹಿನ್ನೆಲೆಯಲ್ಲಿಆಯಾ ಜಾತಿಗಳ ವಾಸ್ತವಿಕ ಸ್ಥಿತಿಗತಿಯ ಅಧ್ಯಯನವನ್ನು ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರಸಕ್ತ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡದ ಪಂಚಮಸಾಲಿ ಸಮುದಾಯ, ಕುಡ ಒಕ್ಕಲಿಗ, ಆದಿ ಬಣಜಿಗ ಪಂಗಡವರು ಸೇರಿದಂತೆ ವಿವಿಧ ಒಳ ಪಂಗಡದ ಜನಾಂಗ ವಿವಿಧ ರೀತಿಯ ಮನವಿಯಲ್ಲಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಆಯಾ ಒಳ ಪಂಗಡದ ಸಮುದಾಯದ ಕುಲ ಕಸುಬಿಗೆ ಅನುಗುಣವಾಗಿ ಅವರ ಸ್ಥಿತಿಗತಿಯ ಅಧ್ಯಯನವನ್ನು ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಪ್ರವಾಸದ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕೆಲ ಒಳ ಪಂಗಡದವರು ಈವರೆಗೆ ಜಾತಿ ಪಟ್ಟಿಯಲ್ಲಿ ನಮ್ಮ ಜಾತಿಯನ್ನು ಸೇರ್ಪಡೆ ಮಾಡಲಾಗಿಲ್ಲ. ಹೀಗಾಗಿ ನಮ್ಮ ಸಮುದಾಯವನ್ನು ಇದೇ ಜಾತಿಯವರು ಎಂದು ಗುರುತಿಸುವುದಕ್ಕೆ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರೆ, ಕೆಲವರು ಎಲ್ಲ ಒಳಪಂಗಡವನ್ನು ಸೇರಿಸಿ ವೀರಶೈವ ಲಿಂಗಾಯತ ಧರ್ಮ ಎಂದು ಘೋಷಣೆ ಮಾಡುವಂತೆ ಮನವಿಯನ್ನು ಸಲ್ಲಿಸಿರುವರು.

ADVERTISEMENT

ಪ್ರಸಕ್ತ ಸಲ್ಲಿಕೆಯಾಗಿರುವ ಮನವಿಗಳನ್ನು ಪರಿಶೀಲನೆ ಮಾಡಿ ನಂತರ ಬೆಂಗಳೂರಿನಲ್ಲಿ ಆಯೋಗದ ಸರ್ವ ಸದಸ್ಯರನ್ನೊಳಗೊಂಡ ಸಭೆಯನ್ನು ಮಾಡಿದ ನಂತರ ಅದರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಾತಿ ಪಟ್ಟಿಯನ್ನು ಸೇರ್ಪಡೆ ಮಾಡುವುದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದರೆ, ಧರ್ಮ ಎಂದು ಘೋಷಣೆ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿರುವ ಹಿನ್ನಲೆಯಲ್ಲಿ ಈ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದಲ್ಲದೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳಿಸಲು ಉದ್ದೇಶಿಸಲಾಗಿದೆ ಎಂದರು.

ಪ್ರಸಕ್ತ ಕೇಂದ್ರ ಸರ್ಕಾರದ ಜಾತಿ ಪಟ್ಟಿಯಲ್ಲಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದ ಪಟ್ಟಿಯಲ್ಲಿ ಬರುವುದರಿಂದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡದವರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‍ದಲ್ಲಿ ಪ್ರಕರಣ ಇದೆ. ಅಂತಿಮ ತೀರ್ಪು ಬರುವವರೆಗೂ ಇಗಿರುವ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶಟ್ಟರ ಮಾತನಾಡಿ, ಪ್ರಸಕ್ತ ದೇಶದಲ್ಲಿ ಅಧಿಕೃತವಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಆರು ಧರ್ಮಗಳಂತೆ ಏಳನೇ ಧರ್ಮವಾಗಿ ವೀರಶೈವ ಲಿಂಗಾಯತ ಧರ್ಮ ಎಂದು ಘೋಷಣೆ ಮಾಡುವುದಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಆಯೋಗದ ಸದಸ್ಯರಾದ ಸುವರ್ಣ, ಶಾರುಣಜಿ ನಾಯ್ಕ, ರಾಜಶೇಖರ, ಕಲ್ಯಾಣಕುಮಾರ, ಶೆಟ್ಟರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.