ADVERTISEMENT

ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ

ನಗರಸಭೆ ಬಜೆಟ್‌ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 3:08 IST
Last Updated 10 ಜನವರಿ 2026, 3:08 IST

ರಾಣೆಬೆನ್ನೂರು: ನಗರದಲ್ಲಿ ಬೀದಿ ದೀಪ, ರಸ್ತೆ, ಚರಂಡಿಗಳನ್ನು ಹಾಗೂ ನಗರದ ವಿವಿಧೆಡೆ ವೃತ್ತಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಿ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಿಸಿ, ನಗರದ ವಿವಿಧ ಮುಕ್ತಿಧಾಮಕ್ಕೆ ಬಡವರಿಗೆ ಅನುಕೂಲಕ್ಕಾಗಿ ನಗರಸಭೆಯಿಂದ ಮುಕ್ತಿವಾಹನದ ವ್ಯವಸ್ಥೆಯಾಗಬೇಕು ಎಂದು ಸಾರ್ವಜನಿಕರು ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಲಹೆ ನೀಡಿದರು.

ಇಲ್ಲಿನ ನಗರಸಭೆಯ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಶುಕ್ರವಾರ 2026-27ನೇ ಸಾಲಿನ ನಗರಸಭೆ ಆಯವ್ಯಯ ಸಿದ್ದಪಡಿಸುವ ಅಂಗವಾಗಿ ಮೊದಲ ಹಂತದ ಪೂರ್ವಭಾವಿ ಸಭೆ ನಡೆಯಿತು.

ನಗರದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಟ್ರಾಫಿಕ್ ತೊಂದರೆಯಾಗದಂತೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ರಾಜ ಕಾಲುವೆಯ ಕಲುಷಿತ ನೀರು ದೊಡ್ಡ ಕೆರೆಗೆ ಹೋಗದಂತೆ ತಡೆಹಿಡಿಯಬೇಕು. ಅಡವಿ ಆಂಜನೇಯ ಬಡಾವಣಿಗೆ ಹಾಗೂ ಕೆ.ಎಚ್ ಬಿ ಕಾಲೊನಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ನಗರಸಭೆಯ ಕಲ್ಯಾಣ ಮಂಟಪ ಹಾಗೂ ಹಾಳಾದ ನಗರಸಭೆ ಮಳಿಗೆಗಳನ್ನು ದುರಸ್ತಿಗೊಳಿಸಬೇಕು, ಕೃಷಿ ಪಾರ್ಕ್ ನಿರ್ಮಿಸಬೇಕು. ಯೋಧ ಭವನ ನಿರ್ಮಿಸಬೇಕು. ಅಲ್ಲಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆನ್‌ಲೈನ್ ಮೂಲಕ ನಗರಸಭೆಯ ತೆರಿಗೆಗಳನ್ನು ಪಾವತಿಗೆ ಅನುಕೂಲ ಮಾಡಬೇಕು. ಬಸ್ ನಿಲ್ದಾಣದಿಂದ ರೈಲ್ವೆ ಸ್ಟೆಷನ್ ವರೆಗೆ ಒಂದೆರೆಡು ಕಡೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು. ಈ ರಸ್ತೆ ದುರಸ್ತಿಗೊಳಿಸಬೇಕು ಎಂದರು.

ನಗರಸಭೆ ಶಾಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು. ಇಲ್ಲವೇ ಈಗಿರುವ ಕಟ್ಟಡಗಳನ್ನು ಜೀರ್ಣೋದ್ಧಾರ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಬಜೆಟ್ ನಲ್ಲಿ ತೆಗೆದುಕೊಳ್ಳಲು ಸಾರ್ವಜನಿಕರು ಮತ್ತು ನಗರಸಭೆಯ ಮಾಜಿ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಲಹೆ ನೀಡಿದರು.

ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತ ಅಧಿಕಾರಿ ವಿಜಯಮಹಾಂತೇಶ ದಾನಮ್ಮನವರ್, ಇಂದಿನ ಬಜೆಟ್ ಸಭೆಯಲ್ಲಿ ನಾಗರಿಕರು ಉಪಯುಕ್ತವಾದ ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವುಗಳನ್ನು ಪರಿಶೀಲಿಸಿ ಮುಂಬರುವ ಬಜೆಟ್ ನಲ್ಲಿ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನಗಳ ಜೊತೆಗೆ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ನಗರದ ಅಭಿವೃದ್ಧಿಗೆ ಸಹಕರಿಸಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾದಷ್ಟು ಮಟ್ಟಿಗೆ ಬರಲಿರುವ ಬಜೆಟ್ ನಲ್ಲಿ ಸೇರ್ಪಡೆಗೊಳಿಸಲು ಜಿಲ್ಲಾಧಿಕಾರಿ ಭರವಸೆ ನೀಡಿದರು.

ನಗರಸಭಾ ಪೌರಾಯುಕ್ತ ಎಫ್.ಐ. ಇಂಗಳಗಿ, ವೈದ್ಯರಾದ ಡಾ.ಎಸ್ ಎಲ್. ಪವಾರ, ಡಾ.ಗಿರೀಶ್ ಕೆಂಚಪ್ಪನವರ, ಡಾ.ರತ್ನಪ್ರಭಾ, ಮಾಜಿ ಸದಸ್ಯ ಮಲ್ಲಿಕಾರ್ಜುನ್ ಅಂಗಡಿ, ಹನುಮಂತಪ್ಪ ಕಬ್ಬಾರ, ಅಮರನಾಥ್ ಭೂತೆ, ಪ್ರಭಾಕರ್ ಶಿಗ್ಲಿ, ಮಲ್ಲಿಕಾರ್ಜುನ ಸಾವಕ್ಕಳವರ, ಚಂದ್ರಣ್ಣ ಬಣಕಾರ, ಮಲ್ಲೇಶಪ್ಪ ಮದ್ಲೇರ, ಎಸ್.ಕೆ. ಗಿರಡ್ಡಿ , ಸಂಜೀವರೆಡ್ಡಿ ಮಧುಗುಣಕಿ, ಗಣೇಶ ಗೋಣಿಬಸಮ್ಮನವರ, ಪಿ.ವಿ. ಮಠದ, ಕೊಟ್ರೇಶಪ್ಪ ಎಮ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.