ADVERTISEMENT

ಬಾಲಕನ ಕೊಲೆ ಪ್ರಕರಣ: ಸತ್ಯಾಂಶ ಹೊರಬರಲು ಸಿಐಡಿ ತನಿಖೆಯಾಗಲಿ -ಕುಟುಂಬಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 16:32 IST
Last Updated 13 ಮಾರ್ಚ್ 2021, 16:32 IST
ಕೊಲೆಯಾದ ತೇಜಸ್‌ಗೌಡ ಮಲ್ಲಿಕೇರಿ
ಕೊಲೆಯಾದ ತೇಜಸ್‌ಗೌಡ ಮಲ್ಲಿಕೇರಿ   

ಹಾವೇರಿ: ‘ನನ್ನ ಮಗನ ಕೊಲೆಯ ಪ್ರಕರಣದಲ್ಲಿಕಾಣದ ವ್ಯಕ್ತಿಗಳ ಕೈವಾಡವಿದೆ. ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ವ್ಯವಸ್ಥಿತ ಸಂಚು ನಡೆಸಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು’ ಎಂದು ಮೃತ ಬಾಲಕ ತೇಜಸ್‌ಗೌಡ ಅವರ ತಂದೆ, ವಕೀಲ ಜಗದೀಶ ಮಲ್ಲಿಕೇರಿ ಒತ್ತಾಯಿಸಿದರು.

ತೇಜಸ್‌ಗೌಡ (11) ಮಾರ್ಚ್‌ 7ರಂದು ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಸುಟ್ಟ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ಕೊಲೆ ಆರೋಪದ ಮೇಲೆ ಸಹೋದರರಿಬ್ಬರನ್ನು ಬಂಧಿಸಿದ್ದರು. ಆರೋಪಿಗಳು ₹20 ಲಕ್ಷಕ್ಕಾಗಿ ಬಾಲಕನನ್ನು ಅಪಹರಿಸಿ, ಹತ್ಯೆ ಮಾಡಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕನ ತಂದೆ ಜಗದೀಶ, ಪೊಲೀಸರ ಈ ಹೇಳಿಕೆಯನ್ನು ತಳ್ಳಿಹಾಕಿದರು.

ADVERTISEMENT

‘ಹಣಕ್ಕಾಗಿ ಅಪಹರಿಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳುತ್ತಿರುವುದು ಸುಳ್ಳು. ನನಗೆ ಅಪಹರಣಕಾರರಿಂದ ಹಣಕ್ಕಾಗಿ ಯಾವುದೇ ಕರೆ ಬಂದಿರಲಿಲ್ಲ. ನನ್ನ ಬೆಳವಣಿಗೆ ಸಹಿಸದವರು ಈ ಕೃತ್ಯ ಎಸಗಿರಬಹುದು. ಕೊಲೆಗೆ ನಿಜವಾದ ಕಾರಣ ಏನು ಎನ್ನುವುದು ಹೊರಬರಬೇಕು’ ಎಂದು ಹೇಳಿದರು.

ಜಗದೀಶ ಅವರ ಬಾಮೈದ ಸತೀಶ ಮಾತನಾಡಿ, ‘ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಇದಕ್ಕೂ ಮುಂಚೆ ಹೇಳಿದ್ದರು. ಒಮ್ಮೆ ಹಣಕ್ಕಾಗಿ, ಮತ್ತೊಮ್ಮೆ ಅನೈತಿಕ ಸಂಬಂಧಕ್ಕಾಗಿ ಎಂದು ಪೊಲೀಸರು ಪದೇ ಪದೇ ಹೇಳಿಕೆ ಬದಲಾಯಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ನುಡಿದರು.

‘ನಮ್ಮಲ್ಲಿ ಹಣಕ್ಕೆ ಕೊರತೆಯಿಲ್ಲ. ಹೀಗಾಗಿಯೇ ತೇಜಸ್‌ಗೌಡನನ್ನು ಹುಡುಕಿಕೊಟ್ಟವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದೆವು. ಅಪಹರಣಕಾರರ ನಿಜವಾದ ಉದ್ದೇಶ ಹಣ ಪಡೆಯುವುದೇ ಆಗಿದ್ದರೆ, ಬಾಲಕನನ್ನು ಮರಳಿಸಿ ಹಣ ಪಡೆದುಕೊಂಡು ಹೋಗಬಹುದಿತ್ತು. ಹೀಗಾಗಿಲ್ಲ. ದೊಡ್ಡ ದೊಡ್ಡ ವ್ಯಕ್ತಿಗಳು ಈ ಕೊಲೆ ಪ್ರಕರಣದ ಹಿಂದೆ ಇದ್ದಾರೆ’ ಎಂದು ಆರೋಪಿಸಿದರು.

ಮೃತ ಬಾಲಕನ ತಾಯಿ ರೇಣುಕಾ ಮಾತನಾಡಿ, ‘ರೊಕ್ಕ ಕೇಳಿದ್ರೆ ಅವರ (ಅಪಹರಣಕಾರರ)ಮೇಲೆ ಸುರೀತಿದ್ದೆ. ಈ ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಹುನ್ನಾರ ಮಾಡಿದ್ದಾರೆ. ಕೊಲೆ ಪ್ರಕರಣದ ಹಿಂದೆ ಇರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಮತ್ತೊಬ್ಬರಿಗೆ ಈ ರೀತಿ ಅನ್ಯಾಯ ಆಗಬಾರದು’ ಎಂದು ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.