ADVERTISEMENT

ರಸ್ತೆ ಮುಳುಗಿದರೆ ಮಕ್ಕಳು ಶಾಲೆಗೆ ಹೋಗಲ್ಲ: ಅಧಿಕಾರಿಗಳ ಎದುರು ಗ್ರಾಮಸ್ಥರ ಅಳಲು

ಅಧಿಕಾರಿಗಳ ಎದುರು ಸಮಸ್ಯೆ ಬಿಚ್ಚಿಟ್ಟ ಗುಡೂರ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 15:21 IST
Last Updated 16 ಜುಲೈ 2022, 15:21 IST
ಗುಡೂರ ಮತ್ತು ಹಾಲಗಿ ಗ್ರಾಮಕ್ಕೆ ಸಂಪರ್ಕ ಮಾರ್ಗ ವರದಾ ನದಿಯ ಹಿನ್ನಿರಿಗೆ ಮುಳುಗಿರುವದನ್ನು ವಿಕ್ಷಣೆ ಮಾಡುತ್ತಿರುವ ತಹಶೀಲ್ದಾ,ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕ ಅಧಿಕಾರಿಗಳು ಕಾಣಬಹುದು.
ಗುಡೂರ ಮತ್ತು ಹಾಲಗಿ ಗ್ರಾಮಕ್ಕೆ ಸಂಪರ್ಕ ಮಾರ್ಗ ವರದಾ ನದಿಯ ಹಿನ್ನಿರಿಗೆ ಮುಳುಗಿರುವದನ್ನು ವಿಕ್ಷಣೆ ಮಾಡುತ್ತಿರುವ ತಹಶೀಲ್ದಾ,ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕ ಅಧಿಕಾರಿಗಳು ಕಾಣಬಹುದು.   

ಗುತ್ತಲ: ಗ್ರಾಮಸ್ಥರಿಂದ ಬಂದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಹಾವೇರಿ ತಹಶೀಲ್ದಾರ್‌ ಪಿ.ಎಸ್.ಕುಂಬಾರ ಹೇಳಿದರು.

ಇಲ್ಲಿಗೆ ಸಮೀಪದ,ಹಾವೇರಿ ತಾಲ್ಲೂಕು ವ್ಯಾಪ್ತಿಯ ಗುಡೂರ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಾವೇರಿ ಜಿಲ್ಲೆಯ ಕಟ್ಟಕಡೆಯ ಗ್ರಾಮ ನಮ್ಮದು. ಮೂಲ ಸೌಕರ್ಯಗಳಿಲ್ಲದೇ ಗ್ರಾಮ ಸೊರಗಿದೆ. ಗ್ರಾಮಕ್ಕೆ ಸುಗಮ ಸಂಚಾರಕ್ಕೆ ರಸ್ತೆಗಳೆ ಇಲ್ಲ’ ಎಂದು ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು.

ADVERTISEMENT

‘ಗ್ರಾಮದ ಜನ ಅರ್ಜಿ ನೀಡುವುದು ಮುಂದುವರಿಯಲಿ. ಹಾಲಗಿ ಗ್ರಾಮಕ್ಕೆ ಹೋಗುವ ರಸ್ತೆ ವರದಾ ನದಿ ಪ್ರವಾಹದಿಂದ ಮುಳುಗಿದ್ದು, ಬನ್ನಿ ನೋಡಿ’ ಎಂದು ಗ್ರಾಮದ ಮುಖಂಡರು ಅಧಿಕಾರಿಗಳನ್ನು ಕರೆದೊಯ್ದರು. ಪ್ರವಾಹದಲ್ಲಿ ಮುಳುಗಿರುವ ರಸ್ತೆ ತೋರಿಸಿದರು. ಸುಗಮ ಸಂಚಾರಕ್ಕಾಗಿ ರಸ್ತೆ ನಿರ್ಮಿಸಿಕೊಡುವಂತೆತಾಲ್ಲೂಕು ಪಂಚಾಯ್ತಿ ಇಒ ಬಸವರಾಜ ಡಿ.ಸಿ ಹಾಗೂ ತಹಶೀಲ್ದಾರ್‌ ಕುಂಬಾರ ಅವರಿಗೆ ಒತ್ತಾಯಿಸಿದರು.

‘ವರದಾ ನದಿಯ ಪ್ರವಾಹಕ್ಕೆ ರಸ್ತೆಗಳು ಜಲಾವೃತಗೊಂಡರೆ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ. ನಮ್ಮ ದಿನನಿತ್ಯದ ಕಾರ್ಯಗಳನ್ನು ಮಾಡುವುದು ಹೇಗೆ? 20 ಅಡಿ ಎತ್ತರದಲ್ಲಿ ಸೇತುವೆ ನಿರ್ಮಿಸಿದರೆ, ಸಂಚಾರ ಸುಲಭವಾಗುತ್ತದೆ. ಇಲ್ಲದಿದ್ದರೆ 20 ಕಿ.ಮಿ ಸುತ್ತುವರೆದು ನಮ್ಮ ಗ್ರಾಮ ತಲುಪಬೇಕಾಗುತ್ತದೆ’ ಎಂದು ಗ್ರಾಮಸ್ಥರು ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.

71 ಅರ್ಜಿ: ಕಂದಾಯ ಇಲಾಖೆಗೆ 8, ಸರ್ವೆ ಇಲಾಖೆಗೆ 3 , ಹೆಸ್ಕಾಂಗೆ 3, ಪಶುಸಂಗೋಪನ ಇಲಾಖೆಗೆ 2, ಗ್ರಾಮ ಪಂಚಾಯ್ತಿಗೆ 36 ಅರ್ಜಿ, ಗ್ರಾಮ ಒನ್‌ ಕೇಂದ್ರಕ್ಕೆ 15 ಅರ್ಜಿ,ಕೃಷಿ ಇಲಾಖೆಗೆ 4 ಅರ್ಜಿ ಸೇರಿದಂತೆ ಕಾರ್ಯಕ್ರಮದಲ್ಲಿ ಒಟ್ಟು 71 ಅರ್ಜಿ ಸಲ್ಲಿಕೆಯಾಗಿದ್ದವು.

ಉಪತಹಶೀಲ್ದಾರ್‌ ಎನ್.ಬಿ.ಕಿಚಡೇರ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣಪ್ಪ ಡೊಳ್ಳಿನ, ಬಿಇಒ ಮೌನೇಶ ಬಡಿಗೇರ, ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರ, ಡಾ.ಕೆ.ಎಸ್.ಲಮಾಣಿ, ಹೆಸ್ಕಾಂ ಅಧಿಕಾರಿ ಕಿರಣಕುಮಾರ, ಎನ್.ಎಸ್.ಚಕ್ರಸಾಲಿ, ಎಸ್.ಬಿ.ದೊಡ್ಮನಿ, ಪ್ರವೀಣ ಬಿರಾದಾರ, ಸುಮಂಗಲಾ ಈಟಿ, ನಾಗಯ್ಯ ಹಿರೇಮಠ, ಗೌರಮ್ಮ ಪೂಜಾರ, ಮಂಜುರಡ್ಡಿ ಮಾಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.