ADVERTISEMENT

ಹಾವೇರಿ| ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ: ಬಸವರಾಜ ಬೊಮ್ಮಾಯಿ

ಪಂಚಮಸಾಲಿ ಸಮುದಾಯ ಭವನ ಉದ್ಘಾಟನೆ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 15:38 IST
Last Updated 26 ಮಾರ್ಚ್ 2023, 15:38 IST
ಶಿಗ್ಗಾವಿಯಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಸಚಿವರಾದ ಸಿ.ಸಿ.ಪಾಟೀಲ, ಶಿವರಾಮ ಹೆಬ್ಬಾರ್‌, ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಪಂಚಮಸಾಲಿ ಮುಖಂಡರು ಇದ್ದಾರೆ 
ಶಿಗ್ಗಾವಿಯಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಸಚಿವರಾದ ಸಿ.ಸಿ.ಪಾಟೀಲ, ಶಿವರಾಮ ಹೆಬ್ಬಾರ್‌, ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಪಂಚಮಸಾಲಿ ಮುಖಂಡರು ಇದ್ದಾರೆ    

ಹಾವೇರಿ: ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ ನೀಡಿದರೆ ದೇಶದ ಎಲ್ಲ ಜನರನ್ನು ಸಲಹುತ್ತಾನೆ ಎಂಬುದು ನಮ್ಮ ನಂಬಿಕೆ. ನಮ್ಮ ಸರ್ಕಾರ ಜಾರಿಗೆ ಬಂದ ಮೇಲೆ ರೈತರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿಯಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಉದ್ಘಾಟನೆ ಹಾಗೂ ಹರಧ್ಯಾನ ಮಂದಿರದ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಅವರು ಮಾತನಾಡಿದರು.

ರೈತ ವಿದ್ಯಾನಿಧಿ ಯೋಜನೆಯಡಿ ರಾಜ್ಯದ 11 ಲಕ್ಷ ರೈತರ ಮಕ್ಕಳಿಗೆ ₹818 ಕೋಟಿಯನ್ನು ಅವರ ಅಕೌಂಟ್‌ಗಳಿಗೆ ಹಾಕಲಾಗಿದೆ. ರೈತ ಕಾರ್ಮಿಕ ಮಹಿಳೆಗೆ ಪ್ರತಿ ತಿಂಗಳು ₹1 ಸಾವಿರ ನೀಡುವ ಯೋಜನೆ ಘೋಷಿಸಲಾಗಿದೆ. ಯಶಸ್ವಿನಿ ಯೋಜನೆಯನ್ನು ಮರುಪ್ರಾರಂಭಿಸಿ ₹300 ಕೋಟಿ ನೀಡಲಾಗಿದೆ. ರೈತರಿಗಾಗಿ ಜೀವನಜ್ಯೋತಿ ಜೀವವಿಮಾ ಪ್ರಾರಂಭ ಮಾಡಿ, ₹180 ಕೋಟಿ ಮೀಸಲಿರಿಸಲಾಗಿದೆ ಎಂದರು.

ADVERTISEMENT

₹380 ಕೋಟಿ ವೆಚ್ಚ:

ಕಳೆದ ವರ್ಷ ರೈತ ಶಕ್ತಿ ಯೋಜನೆಗೆ ₹380 ಕೋಟಿ ವೆಚ್ಚ ಮಾಡಲಾಗಿದೆ. ಇದು 57 ಲಕ್ಷ ರೈತರಿಗೆ ತಲುಪಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ ₹2 ಸಾವಿರ ಕೋಟಿಯನ್ನು ಬೊಕ್ಕಸದಿಂದ ನೀಡಲಾಗುತ್ತಿದೆ. ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು ₹5 ಲಕ್ಷಕ್ಕೆ ಏರಿಸಲಾಗಿದೆ. ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ ನೀಡಿ ದೇಶಕ್ಕೆ ಸಲ್ಲುವ ಕೆಲಸ ಮಾಡಲಾಗಿದೆ ಎಂದರು.

ಸಣ್ಣ ಸಮುದಾಯಯಗಳಿಗೆ ವಿಶೇಷ ಆದ್ಯತೆ ನೀಡಲು 8ರಿಂದ 10 ನಿಗಮಗಳನ್ನು ಸ್ಥಾಪಿಸಲಾಗಿದೆ. ಜಾತಿ, ಧರ್ಮ ಎಣಿಸದೆ, ಎಲ್ಲ ಸಮುದಾಯದ ಬಡವರ ಕಲ್ಯಾಣಕ್ಕೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು.

ಪಂಚಮಸಾಲಿಗಳಿಗೆ ಕೊಡುಗೆ:

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಕಿತ್ತೂರು ಚನ್ನಮ್ಮ ಮೂರ್ತಿ ಉದ್ಘಾಟನೆ ಮತ್ತು ಪಂಚಮಸಾಲಿ ಕಲ್ಯಾಣ ಮಂಟಪ ನಿರ್ಮಾಣ ಹಾಗೂ ಹರಧ್ಯಾನ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಹರಿಹರ ಪೀಠಕ್ಕೆ ₹10 ಕೋಟಿಯನ್ನು ಬಿ.ಎಸ್‌.ಯಡಿಯೂರಪ್ಪ ಅವರಿಂದ ಬೊಮ್ಮಾಯಿ ಅವರು ಮಂಜೂರು ಮಾಡಿಸಿದ್ದರು ಎಂಬುದನ್ನು ನೆನಪಿಸಿಕೊಂಡರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಶಿವರಾಮ ಹೆಬ್ಬಾರ್‌, ಶಂಕರ ಮುನೇನಕೊಪ್ಪ, ಸಿ.ಸಿ.ಪಾಟೀಲ್‌, ಶಾಸಕ ಅರುಣ್‌ಕುಮಾರ್‌ ಪೂಜಾರ್‌, ಮಹಾಂತ ಸ್ವಾಮೀಜಿ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಕೇಲಗಾರ, ಗೀತೆ ರಚನೆಕಾರ ಕೆ.ಕಲ್ಯಾಣ್‌, ಪಂಚಮಸಾಲಿ ಮುಖಂಡರಾದ ಉಮಾಪತಿ ಬಿ.ಸಿ., ವೀರೇಶ್ ಆಜೂರ್, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರು, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಶ್ರೀಕಾಂತ್ ಬುಳಕ್ಕನವರ, ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ, ಬಸವರಾಜ್ ದಿಂಡೂರ, ಬಾವಿಬೆಟ್ಟಪ್ಪ, ನಾಗೇಂದ್ರ ಕಡಕೋಳ, ಶೋಭಾ ನಿಸ್ಸೀಮಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.