ADVERTISEMENT

ಹಾನಗಲ್| ಸಿ.ಎಂ. ಬದಲಾವಣೆ ನನಗೆ ಗೊತ್ತಿಲ್ಲ: ಶಾಸಕ ಶ್ರೀನಿವಾಸ ಮಾನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:59 IST
Last Updated 25 ನವೆಂಬರ್ 2025, 2:59 IST
ಶ್ರೀನಿವಾಸ ಮಾನೆ
ಶ್ರೀನಿವಾಸ ಮಾನೆ   

ಹಾನಗಲ್: ‘ಕಾಂಗ್ರೆಸ್‌ ಪಕ್ಷದಲ್ಲಿ ಹಣದಿಂದ ಮುಖ್ಯಮಂತ್ರಿಯಾಗುವ ಪರಂಪರೆ ಇಲ್ಲ. ಸಿ.ಎಂ. ಬದಲಾವಣೆ ಕುರಿತು ಯಾರೂ ನಮ್ಮೊಂದಿಗೆ ಚರ್ಚಿಸಿಲ್ಲ. ನಮ್ಮ ಅಭಿಪ್ರಾಯ ಪಡೆದಿಲ್ಲ’ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಸ್ಪಷ್ಟಪಡಿಸಿದರು.

‘ಕ್ಷೇತ್ರದ ಅಭಿವೃದ್ಧಿಯ ಉದ್ದೇಶದಿಂದ ಆಗಾಗ್ಗೆ ವಿವಿಧ ಸಚಿವರು, ಡಿಸಿಎಂ ಮತ್ತು ಮುಖ್ಯಮಂತ್ರಿ ಭೇಟಿಗೆ ಹೋಗಿರುತ್ತೇವೆ. ಆದರೆ ರಾಜಕೀಯ ಚರ್ಚೆ ಮಾಡುವುದಿಲ್ಲ. ಎರಡು ದಿನಗಳ ಹಿಂದೆ ಹಾವೇರಿಯ ಮೂರು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಮಾಡಿರುವುದರಲ್ಲಿ ಯಾವುದೇ ವಿಶೇಷ ಅರ್ಥವಿಲ್ಲ’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇದೆ. ಎರಡೂವರೆ ವರ್ಷ ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮವಾಗಿ ಸ್ಪಂದಿಸಿದ್ದಾರೆ. ಮುಂದಿನ ಅವಧಿಗೆ ಹಾವೇರಿಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿಲುವು ಜಿಲ್ಲೆಯ ಆರು ಶಾಸಕರ ಒಮ್ಮತದ ಅಭಿಪ್ರಾಯವಾಗಿದೆ. ಜಿಲ್ಲೆಯ ಯಾರಿಗೆ ಅವಕಾಶ ಸಿಕ್ಕರೂ ಸಂತೋಷವಿದೆ’ ಎಂದರು.

ADVERTISEMENT

‘ಯುವ ಕಾಂಗ್ರೆಸ್‌ ಸಂಘಟನೆಯ ಮೂಲಕ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನದು ಯಾವ ಬಣವೂ ಅಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ನಮ್ಮ ಸಚಿವ ಸ್ಥಾನದ ಪ್ರಯತ್ನಕ್ಕೆ ಬಣದ ಬಣ್ಣ ಹಚ್ಚಲಾಗುತ್ತಿದೆ’ ಎಂದು ಅವರು ಹೇಳಿದರು.

‘ಹಲವು ಬಾರಿ ಸಚಿವರಾದವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇರುತ್ತದೆ. ನನಗೆ ಸಚಿವನಾಗಬೇಕು ಎಂಬ ಆಸೆ ಇರುವುದು ಸಹಜ’ ಎಂದರು.

ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ, ಬಣ ರಾಜಕಾರಣದ ಕುರಿತು ಪ್ರಶ್ನೆಗೆ ಉತ್ತರಿಸಿದ ಶಾಸಕ ಮಾನೆ, ‘ನಮ್ಮಲ್ಲಿ ಬಣ ರಾಜಕಾರಣದ ಪ್ರಶ್ನೆಯೇ ಇಲ್ಲ. ಎಲ್ಲವೂ ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟದ್ದು. ಪಕ್ಷದ ಹಿತಕ್ಕಾಗಿ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿ ಕರ್ನಾಟಕದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರಿಯಾದ ನಿರ್ಣಯ ಕೈಗೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಪುಟ ಪುನಾರಚನೆ ಬಗ್ಗೆ ನಾನು ಮಾತನಾಡುವುದಿಲ್ಲ. ಈಗಿರುವ ಎರಡು ಖಾಲಿ ಸಚಿವ ಸ್ಥಾನಗಳ ಪೈಕಿ ಒಂದನ್ನು ಹಾವೇರಿ ಜಿಲ್ಲೆಗೆ ನೀಡಬೇಕು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ
ಶ್ರೀನಿವಾಸ ಮಾನೆ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.