ADVERTISEMENT

ಹಾವೇರಿ | ಪ್ರಜಾವಾಣಿ ವರದಿ‌ ಫಲಶ್ರುತಿ: ಆರೋಗ್ಯ ಇಲಾಖೆ ಎಂಜಿನಿಯರ್ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 10:30 IST
Last Updated 25 ಜುಲೈ 2023, 10:30 IST
   

ಹಾವೇರಿ: ಜಿಲ್ಲಾಸ್ಪತ್ರೆಯ‌ ಮಕ್ಕಳ ವಾರ್ಡ್, ತಾಯಂದಿರ ವಾರ್ಡ್ ಸೇರಿ ಬಹುತೇಕ ವಾರ್ಡ್‌ಗಳು ಮಳೆಯಿಂದ ಸೋರುತ್ತಿದ್ದು, ರೋಗಿಗಳಿಗೆ ತೀವ್ರ ಸಮಸ್ಯೆಯಾಗಿದೆ. ನಿರ್ಲಕ್ಷ್ಯ ತೋರಿರುವ ಆರೋಗ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ನಾಯಕ್‌ ಅವರನ್ನು ತಕ್ಷಣವೇ ಅಮಾನತು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದರು.

ನಗರದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ನೇರವಾಗಿ‌ ಜಿಲ್ಲಾಸ್ಪತ್ರೆಗೆ ಭೇಟಿನೀಡಿದ ಅವರು ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು. ತಕ್ಷಣವೇ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರಿಗೆ ಕರೆಮಾಡಿ, ‘ಎಂಜಿನಿಯರ್‌ ಅಮಾನತುಗೊಳಿಸಿ’ ಎಂದು ಸೂಚಿಸಿದರು.

ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ವಾರ್ಡ್, ತಾಯಂದಿರ ವಾರ್ಡ್ ಸೇರಿ ವಿವಿಧ ವಾರ್ಡ್‌ಗಳಲ್ಲಿ ಚಾವಣಿ, ಗೋಡೆ ಸೋರುತ್ತಿರುವುದು ಕಂಡ ಅವರು, ‘ರೋಗಿಗಳನ್ನು ಬೇರೆಡೆ ಸ್ಥಳಾಂತರ ಮಾಡದೆ, ವಾರ್ಡ್‌ನ ಮೇಲ್ಭಾಗದಲ್ಲಿ ಕಟ್ಟಡ ಕಾಮಗಾರಿ ಹೇಗೆ ಕೈಗೊಂಡಿದ್ದೀರಿ? ನಿಮಗೆ ತಲೆಯಲ್ಲಿ ಬುದ್ಧಿ ಇಲ್ವಾ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ, ಎಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು.

ADVERTISEMENT

‘ನಿಮಗೆ ಮನುಷ್ಯತ್ವ ಇಲ್ವಾ? ಕತ್ತೆ ಕಾಯ್ತಿದ್ದೀರಾ? ಸಂಬಳ ಕೊಟ್ಟಿಲ್ವಾ? ಇನ್ನು ನಾಲ್ಕು ದಿನಗಳಲ್ಲಿ ಮಳೆ ಸೋರಿಕೆ ತಡೆಗಟ್ಟಬೇಕು’ ಎಂದು ಸೂಚನೆ ನೀಡಿದರು. ಶಾಸಕ‌ ರುದ್ರಪ್ಪ ಲಮಾಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರನ್ನು, ‘ನೀವು ಈ ಸಮಸ್ಯೆ ಬಗ್ಗೆ ಏಕೆ ಗಮನಹರಿಸಿಲ್ಲ’ ಎಂದು ಪ್ರಶ್ನಿಸಿದರು.

ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡಿದ ಬಗ್ಗೆ ಶಾಸಕ ರುದ್ರಪ್ಪ ಲಮಾಣಿ ಅವರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ‘ಕಳಪೆ ಕಾಮಗಾರಿ ಮತ್ತು ವಿಳಂಬ ಧೋರಣೆ ಮಾಡಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಏಕೆ ಸೇರಿಸಿಲ್ಲ’ ಎಂದು ಅವರು ಪ್ರಶ್ನಿಸಿದರು.

ಪರಿಸ್ಥಿತಿ ಹೇಳಲು ಬಂದ ಎಂಜಿನಿಯರ್ ಅವರನ್ನು ಗದರಿಸಿದ ಮುಖ್ಯಮಂತ್ರಿ, ‘ರೋಗಿಗಳ ಬೆಡ್ ಮೇಲೆ ಮಳೆ ನೀರು ಸೋರಿರುವುದು ಕಣ್ಣಿಗೆ ಕಾಣುತ್ತಿಲ್ಲವೇ? ದುರಸ್ತಿ ಕಾರ್ಯ ಕೈಗೊಳ್ಳಲು ಅನುದಾನದ ಕೊರತೆ ಇದೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು. ನಂತರ ಆಸ್ಪತ್ರೆ ಬಗ್ಗೆ ರೋಗಿಗಳು ಮತ್ತು ಸಂಬಂಧಿಕರಿಂದ ಮಾಹಿತಿ ಪಡೆದರು.

ಹಾವೇರಿ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಕುರಿತು ಜುಲೈ 25ರ ಪ್ರಜಾವಾಣಿ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.