ADVERTISEMENT

ಪರಿಹಾರದ ಹಣ ಸಂದಾಯಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:29 IST
Last Updated 30 ಜುಲೈ 2023, 14:29 IST

ಬ್ಯಾಡಗಿ: ತಾಲ್ಲೂಕಿನ 862 ರೈತರು ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದರೂ ಅವರಿಗೆ ಸಿಗಬೇಕಾದ ಪರಿಹಾರದ ಹಣ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಸಾಲಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ 21,480 ರೈತರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 20,978 ರೈತರಿಗೆ ಪರಿಹಾರದ ಹಣ ಸಂದಾಯವಾಗಿದೆ. ಉಳಿದ ರೈತರಿಗೆ ಪರಿಹಾರದ ಹಣ ಇನ್ನೂ ತಲುಪಿಲ್ಲ ಎಂದು ಆರೋಪಿಸಿದರು.

ಕಳೆದ ನಾಲ್ಕು ವರ್ಷಗಳಿಂದ ರೈತರು ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಆದರೆ ಬಾಕಿ ಉಳಿಸಿಕೊಂಡಿರುವ 862 ರೈತರಿಗೆ ಹಣ ತಲುಪದಿರಲು ಆಧಾರ ನಂಬರ್ ಮಿಸ್ ಮ್ಯಾಚ್ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಫಸಲ್ ಬಿಮಾ ಯೋಜನೆಯ ಅಡಿ ಬೆಳೆವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಆ. 31ರವರೆಗೆ ವಿಸ್ತರಿಸಬೇಕು. ಕೂಡಲೇ ಬಾಕಿ ಉಳಿದ ರೈತರ ಪರಿಹಾರದ ಹಣವನ್ನು ಶೀಘ್ರ ಸಂದಾಯ ಮಾಡುವಂತೆ ಆಗ್ರಹಿಸಿದರು.

ADVERTISEMENT

ಈ ವೇಳೆ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ಕಾರ್ಯಾಧ್ಯಕ್ಷ ಕಿರಣ ಗಡಿಗೋಳ, ಮೌನೇಶ ಕಮ್ಮಾರ, ಕರಬಸಪ್ಪ ಶಿರಗಂಬಿ, ಮಂಜುನಾಥ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.