ರಾಣೆಬೆನ್ನೂರು: ಕಾನೂನು ಪದವಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಹಾಗೂ ಭಾರತೀಯ ಕರಾರು ಅಧಿನಿಯಮ 1872 ಭಾಗ–1 ಮರು ಪರೀಕ್ಷೆಯ ಫಲಿತಾಂಶ ಕೂಡಲೇ ಬಿಡುಗಡೆ ಮಾಡುವಂತೆ ಎಸ್ಎಫ್ಐ ಕಾರ್ಯಕರ್ತರು ಆಗ್ರಹಿಸಿದರು.
ಇಲ್ಲಿನ ಆರ್‌ಟಿಇಎಸ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಬಿ. ರಮೇಶ್ ಅವರಿಗೆ ಈ ಕುರಿತು ಗುರುವಾರ ಮನವಿ ಸಲ್ಲಿಸಲಾಯಿತು.
ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಎಸ್. ಮಾತನಾಡಿ, ‘ಮೂರು ವರ್ಷದ ಕಾನೂನು ಪದವಿಯಲ್ಲಿ ಮೊದಲನೇ ಸೆಮಿಸ್ಟರ್‌ನ ಭಾರತೀಯ ಕರಾರು ಅಧಿನಿಯಮ 1872 ಭಾಗ–1 ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು. ಈ ಹಿಂದೆ ಯಾವುದೋ ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆ ನಕಲು ಮಾಡಿದ್ದರಿಂದ ನ್ಯಾಯಾಲಯವೇ ಮರು ಪರೀಕ್ಷೆ ನಡೆಸಲು ಆದೇಶಿಸಿದೆ’ ಎಂದರು.
‘ಪರೀಕ್ಷೆ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದ್ದರೂ, ಅಧಿಕಾರಿಗಳು ಹಣದ ಆಸೆಗೆ ಪ್ರಶ್ನೆಪತ್ರಿಕೆ ನಕಲು ಮಾಡಿದ್ದ ನಾಚಿಕೆಗೇಡಿನ ಸಂಗತಿ. ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ವಿಶ್ವವಿದ್ಯಾಲಯದ ನಿಯಮಗಳಿಗೆ ಕಟಿಬದ್ಧರಾಗಿರಬೇಕು’ ಎಂದರು.
ಕೃಷ್ಣ ನಾಯಕ, ದುರುಗಪ್ಪ ನಪೂರಿ, ಸುನೀಲ್ ಕುರುಬರ, ಹನುಮಂತ ಹರಿಜನ, ಕಾಂತೇಶ ಮಠದ, ಅಜೇಯ ಕೊಡ್ಲೆರ, ಕಿರಣ ತುಮ್ಮಿನಕಟ್ಟಿ, ಅರುಣ ಹೆಚ್, ರಾಹುಲ ಮಡಿವಾಳರ, ಪ್ರಸನ್ನಗೌಡ ಹಲಸೂರ, ಬಸವರಾಜ ಹಾವೇರಿ, ಆಸಂಗಿ ವಡ್ಡರ, ಅರುಣಕುಮಾರ ತಿಪ್ಪಣ್ಣನವರ ಇದ್ದರು.
ತಪ್ಪಿತಸ್ಥರಿಗೆ ಶಿಕ್ಷೆ ನೀಡಿ
’‘ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪಾರದರ್ಶಕ ಪರೀಕ್ಷೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಪ್ರಶ್ನೆಪತ್ರಿಕೆ ನಕಲು ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಬಸವರಾಜ ಆಗ್ರಹಿಸಿದರು. ‘ಪರೀಕ್ಷೆಯ ಫಲಿತಾಂಶವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಮರುಮೌಲ್ಯಮಾಪನಕ್ಕೆ ಶುಲ್ಕ ವಿನಾಯಿತಿ ನೀಡಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸದೆ ಮತ್ತೊಮ್ಮೆ ಪರೀಕ್ಷೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.