ಶಿಗ್ಗಾವಿ: 'ಕಾಂಗ್ರೆಸ್ ಪಕ್ಷದಿಂದ ಶಿಗ್ಗಾವಿ ಉಪಚುನಾವಣೆಗೆ ಟಿಕೆಟ್ ಯಾರಿಗೆ ಸಿಗಲಿ, ಅವರ ಗೆಲುವಿಗಾಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಘಟಿತರಾಗುವುದು ಮುಖ್ಯವಾಗಿದೆ. ಅದರಿಂದ ಪಕ್ಷದ ಅಭ್ಯರ್ಥಿ ಗೆಲ್ಲಲು ಸಾಧ್ಯವಿದೆ ಎಂಬ ವಿಶ್ವಾಸವಿದೆ’ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಹೇಳಿದರು.
ತಾಲ್ಲೂಕಿನ ಕುಂದೂರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಗುಡ್ಡದ ಚನ್ನಾಪುರ, ಹೋತ್ನಹಳ್ಳಿ, ಹಳೆಬಂಕಾಪುರ, ನಾರಾಯಣಪುರ, ಹನುಮನಹಳ್ಳಿ ಸೇರಿದಂತೆ ಹಲವು ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಮುಖಂಡರ, ಚುನಾಯತ ಪ್ರತಿನಿಧಿಗಳ ಮತ್ತು ಕಾರ್ಯಕರ್ತರ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಈ ಬಾರಿ ಉಪಚುನಾವಣೆಗೆ ಶ್ರೀರಕ್ಷೆ ಆಗಲಿವೆ. ಪಕ್ಷದ ಮುಖಂಡರು, ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ತಲುಪಿಸುವ ಮೂಲಕ ಹೆಚ್ಚಿನ ಪ್ರಚಾರ ಮಾಡಬೇಕು’ ಎಂದರು.
‘ಬಿಜೆಪಿ ಸರ್ಕಾರ ನಮ್ಮ ಗ್ಯಾರಂಟಿಗಳನ್ನು ಅನುಕರಣೆ ಮಾಡುತ್ತಿದೆ. ಜನತೆಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ತಮ್ಮ ಹಗರಣಗಳನ್ನು ಮುಚ್ಚಿ ಹಾಕಲು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹೋರಾಟ ನಡೆಸಿದ್ದಾರೆ. ಜನರ ನಂಬಿಕೆಗಳಿಂದ ದೂರಾಗಿದ್ದಾರೆ.ಮತದಾರರು ಎಚ್ಚೆತ್ತುಕೊಂಡಿದ್ದಾರೆ. ಈ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖಂಡ ಯಾಸಿರಖಾನ್ ಪಠಾಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕನರ್ಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ತಾಲ್ಲೂಕು ಅಧ್ಯಕ್ಷ ಬಿ.ಸಿ.ಪಾಟೀಲ, ಸವಣೂರ ತಾಲ್ಲೂಕು ಅಧ್ಯಕ್ಷ ಎಂ.ಜೆ.ಮುಲ್ಲಾ, ಮಾಜಿ ಸಚಿವ ಆರ್.ಶಂಕರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.