ADVERTISEMENT

ಕಾಂಗ್ರೆಸ್ ಮುಕ್ತದೊಂದಿಗೆ ಭ್ರಷ್ಟಚಾರಮುಕ್ತ ದೇಶ: ಕಟೀಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:00 IST
Last Updated 27 ಅಕ್ಟೋಬರ್ 2021, 4:00 IST
ತಿಳವಳ್ಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದರು. ಹೇಮಲತಾ ಸಜ್ಜನ, ಸಚಿವ ಸುನೀಲ್ ಕುಮಾರ್ ಇದ್ದಾರೆ
ತಿಳವಳ್ಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದರು. ಹೇಮಲತಾ ಸಜ್ಜನ, ಸಚಿವ ಸುನೀಲ್ ಕುಮಾರ್ ಇದ್ದಾರೆ   

ತಿಳವಳ್ಳಿ: ಕಾಂಗ್ರೆಸ್ ಪಕ್ಷವೆಂದರೆ ಕುಟುಂಬ ರಾಜಕಾರಣ, ಕಾಂಗ್ರೆಸ್ ಎಂದರೆ ಸ್ವಜನ ಪಕ್ಷಪಾತ, ಕಾಂಗ್ರೆಸ್ ಪಕ್ಷವೆಂದರೆ ಭ್ರಷ್ಟಾಚಾರ. ಕಾಂಗ್ರೆಸ್ ಮುಕ್ತ ಭಾರತದ ಗುರಿ ಸಾಧಿಸುವುದರ ಜೊತೆ ಜೊತೆಯಲ್ಲೇ ಭ್ರಷ್ಟಚಾರ ಮುಕ್ತ ಭಾರತ ನಿರ್ಮಾಣ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಗ್ರಾಮದ ಗೇಟ್ ಸರ್ಕಲ್‌ನಿಂದ ಹರ್ಡೀಕರ್ ವೃತ್ತದ ವರೆಗೂ ರೋಡ್ ಶೋ ನಡೆಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಅಭಿವೃದ್ದಿ ಪರ ಕಾರ್ಯಕ್ರಮಗಳ ಪ್ರವಾಹದಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ. ದೇಶದ ಜನರ ನಾಡಿಮಿಡಿತಕ್ಕೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತಿರುವ ಕಾರಣಕ್ಕಾಗಿಯೇ ದೇಶದಾದ್ಯಂತ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎಂದರು.

ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ. ಅದು ಸಮಸ್ತ ಭಾರತೀಯರ ಜನಜೀವನದ ಒಂದು ಭಾಗ. ಜಮ್ಮು ಮತ್ತು ಕಾಶ್ಮೀರದ 370 ರದ್ದು ಮಾಡಿದ್ದರಿಂದ ನಮ್ಮ ಭಾರತ ತ್ರಿವರ್ಣ ಧ್ವಜ ಈಗ ಕಾಶ್ಮೀರದಲ್ಲಿ ಹಾರಾಡುತ್ತಿದೆ. ರೈತರಿಗೆ ಕೇಂದ್ರ ಸರ್ಕಾರ ದಿಂದ ₹ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹ 4 ಸಾವಿರ ಒಟ್ಟು ₹ 10 ಸಾವಿರ ರೂಪಾಯಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.

ADVERTISEMENT

ಕೇಂದ್ರ ಸರ್ಕಾರ 18 ಸಾವಿರ ಹಳ್ಳಿಗಳಿಗೆ ವಿದ್ಯತ್ ಸಂಪರ್ಕ ಕಲ್ಪಿಸಿದೆ. ಯಡಿಯುರಪ್ಪನವರು ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದಾರೆ. ರೈತರ ಬಜೆಟ್ ಮಂಡಿಸಿದ್ದು, ನಮ್ಮ ಸರ್ಕಾರದ ಯಡಿಯುರಪ್ಪನವರೆ ಹೊರತು ಕಾಂಗ್ರೆಸ್ ನವರಲ್ಲ. ಬಸವರಾಜ ಬೊಮ್ಮಯಿ ಅವರು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಜಾರಿಗೆ ತಂದಿದ್ದಾರೆ. ಆದ್ದರಿಂದ ಹಾನಗಲ್‌ ಉಪಚುನಾವಣೆಯಲ್ಲಿ ಉದಾಸಿ ಅವರ ಮಾನಸ ಪುತ್ರ ಶಿವರಾಜ ಸಜ್ಜನರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದರು.

ಇಂದನ ಸಚಿವ ಸುನೀಲ್‌ ಕುಮಾರ ಮಾತನಾಡಿ, ಹಾನಗಲ್ ಕ್ಷೇತ್ರದ ಮತದಾರರು ಪ್ರಜ್ಞಾವಂತರೆಂದು ಕಾಂಗ್ರೆಸ್ ನವರು ಹೇಳುತ್ತಾರೆ, ತಾಲ್ಲೂಕಿನ ಜನ ಮೊದಲು ಬುದ್ದಿವಂತರು ನಂತರ ಪ್ರಜ್ಞಾವಂತರು ಅವರಿಗೆ ಯಾರಿಗೆ ಮತ ನೀಡಬೇಕು ಎಂಬುದು ಗೊತ್ತಿದೆ. ಉದಾಸಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವನ್ನೆ ಆರಂಭಿಸಿದ್ದರು. ಅದನ್ನು ಶಿವರಾಜ ಸಜ್ಜನರ ಮುಂದುವರೆಸಿಕೊಂಡು ಹೋಗುತ್ತಾರೆ. ಹಾನಗಲ್‌ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಉದಾಸಿ ಅವರು ತಿಳವಳ್ಳಿ ಏತ ನೀರಾವರಿ, ಬಸಾಪೂರ ಏತ ನೀರಾವರಿ, ಹೊಂಕಣ ಏತ ನೀರಾವರಿ, ಬಾಳಂಬೀಡ ಏತ ನೀರಾವರಿ, ಹಿರೇಕೌಂಶಿ ಏತ ನೀರಾವರಿ ಹಾಗೂ ಬ್ಯಾತನಾಳ ಏತ ನೀರಾವರಿಗಳನ್ನು ಜಾರಿಗೆ ತಂದು ಅನೇಕ ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನರನ್ನು ಗೆಲ್ಲಿಸುವುದರಿಂದ ಮುಖ್ಯಮಂತ್ರಿಗಳ ಕೈ ಬಲಪಡಿಸಿದಂತಾಗುತ್ತದೆ ಎಂದರು.

ಬಿಜೆಪಿ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಜು ಕಲಕೋಟಿ, ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಹೇಮಲತಾ ಸಜ್ಜನ, ಶಿವಲಿಂಗಪ್ಪ ತಲ್ಲೂರ, ಗಣೇಶಪ್ಪ ಕೋಡಿಹಳ್ಳಿ, ಹನುಮಂತಪ್ಪ ಶಿರಾಳಕೊಪ್ಪ, ರಮೇಶ ಉಪ್ಪಾರ, ಎಂ.ಅಪ್ಪುಶೆಟ್ಟಿ, ಮಾರುತಿ ಈಳಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.