ADVERTISEMENT

‘ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಾಳೆ’

* ಹುಬಳ್ಳಿಯಲ್ಲಿ ಕಾಂಗ್ರೆಸ್ ಹೋರಾಟ * ಹಾವೇರಿಯಲ್ಲಿ ಹೆಚ್ಚಿನ ಕಾರ್ಯಕರ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:04 IST
Last Updated 30 ಏಪ್ರಿಲ್ 2025, 16:04 IST

ಹಾವೇರಿ: ‘ಜನ ಸಾಮಾನ್ಯರು ಬಳಸುವ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಹುಬ್ಬಳ್ಳಿಯ ಗಿರಣಿ ಚಾಳದ ಮೈದಾನದಲ್ಲಿ ಮೇ 1ರಂದು ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರು, ಬೆಳಗಾವಿ ಹಾಗೂ ಇತರೆ ಕಡೆಗಳಲ್ಲಿ ಈಗಾಗಲೇ ಪ್ರತಿಭಟನೆ ಮಾಡಲಾಗಿದೆ. ಈ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಜ ಬಣ್ಣ ಬಯಲು ಮಾಡುತ್ತಿದ್ದೇವೆ’ ಎಂದರು.

‘ಸಂವಿಧಾನ ಬದಲಿಸುವುದಾಗಿ ಕೇಂದ್ರ ಸರ್ಕಾರದ ಕೆಲವರು ಪದೇ ಪದೇ ಹೇಳುತ್ತಿದ್ದಾರೆ. ಸಂವಿಧಾನವನ್ನು ಉಳಿಸುವ ಉದ್ದೇಶದಿಂದ ‘ಸಂವಿಧಾನ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ಆರಂಭಿಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

ಕೇಂದ್ರದ ವಿರುದ್ಧ ಜನಾಕ್ರೋಶ: ‘ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯವರು ಜನಾಕ್ರೋಶ ಹೋರಾಟ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದ ಜನವಿರೋಧಿ ನೀತಿಯನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ಮೇಲೆ ಗೊಂಬೆ ಕೂರಿಸುತ್ತಿದ್ದಾರೆ. ಬಿಜೆಪಿಯವರಿಗೆ ಜನರ ಮೇಲೆ ನಿಜವಾದ ಕಾಳಜಿ ಇದ್ದರೆ, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ದರ ಏರಿಕೆಯಿಂದ ಬೇಸತ್ತಿರುವ ಜನರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಜನರ ಪರವಾಗಿ ಈಗ ಕಾಂಗ್ರೆಸ್ ಹೋರಾಟ ಆರಂಭಿಸಿದೆ’ ಎಂದು ತಿಳಿಸಿದರು.

‘ಅನುದಾನ ಹಂಚಿಕೆ ಹಾಗೂ ಇತರೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿದೆ. ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ತೋರಲಾಗುತ್ತಿದೆ. ಕಳಸ ಬಂಡೂರಿ, ಮೇಕೆದಾಟು ಸೇರಿದಂತೆ ವಿವಿಧ ಯೋಜನೆಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ. ಬಿಜೆಪಿಯ ಸಂಸದರು ಎಲ್ಲದರಲ್ಲೂ ರಾಜಕೀಯ ಮಾಡುವುದನ್ನು ಬಿಡಬೇಕು. ರಾಜ್ಯಕ್ಕೆ ಬರಬೇಕಾದ ಅನುದಾನ ಕೊಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.