
ಹಾನಗಲ್: ವಸತಿ ಯೋಜನೆಗಳ ಫಲಾನುಭವಿಗಳಿಗೆ ನೀಡುವ ಸಹಾಯಧನ ಕೇಂದ್ರ ಸರ್ಕಾರದ ಪಾಲು 8 ವರ್ಷಗಳಿಂದ ಬಂದಿಲ್ಲ. 15ನೇ ಹಣಕಾಸು ಆಯೋಗದ ಅನುದಾನವೂ ಬಿಡುಗಡೆಯಾಗಿಲ್ಲ. ಯುಜಿಡಿ, ಕುಡಿಯುವ ನೀರು, ಚರಂಡಿ ಇನ್ನಿತರ ಕಾಮಗಾರಿಗಳಿಗೆ ನೀಡುತ್ತಿದ್ದ ಶೇ 80ರಷ್ಟು ಅನುದಾನವನ್ನೂ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದರು.
ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಹಾನಗಲ್ ಪಟ್ಟಣ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರೀತಿ, ವಿಶ್ವಾಸ, ಸಹೋದರತೆ, ಸೌಹಾರ್ದತೆ ನೆಲೆಯೂರಬೇಕಾದರೆ ಕಾಂಗ್ರೆಸ್ ಆಡಳಿತದಲ್ಲಿ ಇರಬೇಕು ಎಂದರು.
ಬಿಜೆಪಿ ತನ್ನ ಸಾಧನೆ, ಜನಪರ ಕೆಲಸ ಮುಂದಿಟ್ಟು ರಾಜಕಾರಣ ಮಾಡದೇ, ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಿ, ಮತ ವಿಭಜನೆಯ ಷಡ್ಯಂತ್ರ ಹೂಡಿದ್ದು ಈ ಬಗ್ಗೆ ಜಾಗರೂಕತೆ ವಹಿಸುವಂತೆ ಸಲಹೆ ನೀಡಿದರು.
ಭಾರತದ ಸಂವಿಧಾನದ ಅಂಶಗಳನ್ನೆಲ್ಲ ಪಾಲಿಸುವ ಏಕೈಕ ಪಕ್ಷ ಕಾಂಗ್ರೆಸ್. ಪಡಿತರ ವ್ಯವಸ್ಥೆ, 18ನೇ ವಯಸ್ಸಿಗೆ ಮತದಾನ, ಕಂಪ್ಯೂಟರ್ ಕ್ರಾಂತಿ, ಮೀಸಲಾತಿ ಹೀಗೆ ಸಮಾಜಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದರು.
ದೇಶದ ಸಾಲ ಇದೀಗ ಬರೋಬ್ಬರಿ ₹215 ಲಕ್ಷ ಕೋಟಿಯಷ್ಟಾಗಿದೆ. ಪ್ರತಿಯೊಬ್ಬರ ತಲೆ ಮೇಲೆ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಹೀಗಿದ್ದರೂ ಬಿಜೆಪಿ ಮುಖಂಡರು ಮಾತ್ರ ಬಣ್ಣದ ಮಾತುಗಳು, ಹಸಿ ಸುಳ್ಳುಗಳ ಮೂಲಕ ಭಾವನಾತ್ಮಕ ಸಂಗತಿ ಮುಂದಿಟ್ಟು ಮೋಸ ಮಾಡುತ್ತಿದ್ದಾರೆ. ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ನಗರ ಘಟಕದ ಅಧ್ಯಕ್ಷ ಮತೀನ್ ಶಿರಬಡಗಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸಮಸ್ಯೆಗಳಿವೆ. ಶಾಸಕ ಶ್ರೀನಿವಾಸ ಮಾನೆ ಅವರ ಕಾಳಜಿಯಿಂದ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣುತ್ತಿವೆ ಎಂದರು.
ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಪರಶುರಾಮ ಖಂಡೂನವರ, ಮಮತಾ ಆರೆಗೊಪ್ಪ, ಖುರ್ಷಿದ್ಅಹ್ಮದ್ ಹುಲ್ಲತ್ತಿ, ಮಾಜಿ ಉಪಾಧ್ಯಕ್ಷೆ ಶಂಶಿಯಾ ಬಾಳೂರ, ಮುಖಂಡರಾದ ದುದ್ದುಸಾಬ ಅಕ್ಕಿವಳ್ಳಿ, ಸಿಕಂದರ್ ವಾಲಿಕಾರ, ರವಿ ದೇಶಪಾಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.