ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ವಾಂತಿಭೇದಿಯಿಂದ ಅಸ್ವಸ್ಥರಾಗಿ ನವಲಗುಂದದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಬುಧವಾರ 11 ಮಂದಿ ಬಿಡುಗಡೆಯಾಗಿದ್ದಾರೆ. ಹೊಟ್ಟೆನೋವಿನಿಂದ 7 ಮಂದಿ ದಾಖಲಾಗಿದ್ಧಾರೆ.
ಆಸ್ಪತ್ರೆಯಲ್ಲಿ ಒಟ್ಟು 15 ಮಂದಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಗುಡಿಸಾಗರ ಉಪಕೇಂದ್ರದಲ್ಲಿ ಎಂಟು ಮಂದಿಗೆ ಔಷಧ, ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ.
‘ಹೊಟ್ಟೆನೋವು ಎಂದು 59 ಮಂದಿ ಗುಡಿಸಾಗರದ ಉಪಕೇಂದ್ರದಲ್ಲಿ ಬುಧವಾರ ರಾತ್ರಿ ಪರೀಕ್ಷೆ ಮಾಡಿಸಿದ್ದಾರೆ. ಈ ಪೈಕಿ 8 ಮಂದಿಗೆ ಚಿಕಿತ್ಸೆ, ಔಷಧ ನೀಡಲಾಗಿದೆ. ನಾಲ್ವರನ್ನು ನವಲಗುಂದ ಆಸ್ಪತ್ರೆಗೆ ಕಳಿಸಲಾಗಿದೆ. ಉಳಿದವರು ಆರೋಗ್ಯವಾಗಿದ್ದಾರೆ. ನವಲಗುಂದ ಆಸ್ಪತ್ರೆಯಲ್ಲಿದ್ದವರ ಪೈಕಿ 11 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ಧಾರೆ. ಪ್ರಸ್ತುತ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗುಡಿಸಾಗರ ಗ್ರಾಮದ ಉಪಕೇಂದ್ರದಲ್ಲಿ ಒಪಿಡಿ ವ್ಯವಸ್ಥೆ ಕಲ್ಪಿಸಿ ವೈದ್ಯರು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಮಲ ಮತ್ತು ನೀರಿನ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬರಬೇಕಿದೆ’ ಎಂದು ಅವರು ತಿಳಿಸಿದರು.
ಗುರುವಾರ ಗ್ರಾಮ ಪಂಚಾಯಿತಿ ಸಿಬ್ಬಂದಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಕಾರ್ಯ ಹಾಗೂ ಕೆರೆ ಭಾಗಕ್ಕೆ ಜಾನುವಾರು ನುಗ್ಗದಂತೆ ಕ್ರಮ ವಹಿಸಿದರು. ಎರಡು ದಿನಗಳಿಂದ ಗ್ರಾಮಕ್ಕೆ ನವಲಗುಂದದ ಚನ್ನಮ್ಮನ ಜಲಾಶಯದಿಂದ ಶುದ್ಧ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ಒಳ ಹಾಗೂ ಹೊರ ರೋಗಿಗಳು ಸಹಿತ ಒಟ್ಟು 159 ಮಂದಿಗೆ ಪರೀಕ್ಷೆ ಮಾಡಲಾಗಿದೆ.
‘ಗ್ರಾಮದ ಕೆರೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕೆರೆಯಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕ ದುರಸ್ತಿ ಕಾರ್ಯವೂ ನಡೆದಿದ್ದು, ಗ್ರಾಮದ ಎಲ್ಲ ಚರಂಡಿ, ರಸ್ತೆ ಸ್ವಚ್ಛಗೊಳಿಸಲಾಗಿದೆ. ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಪಂಚಾಯಿತಿ ಅಧ್ಯಕ್ಷೆ ರತ್ನವ್ವ ಗುಡಸಲಮನಿ ಹೇಳಿದರು.
ಗ್ರಾಮಸ್ಥರ ಆರೋಗ್ಯದ ಮೇಲೆ ನಿರಂತರ ನಿಗಾ
‘ಗ್ರಾಮದಲ್ಲಿ ನಿರ್ಮಿಸಿದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಗ್ರಾಮಸ್ಥರ ನಿರಂತರ ಆರೋಗ್ಯ ತಪಾಸಣೆಯೂ ನಡೆದಿದ್ದು ಎರಡು ದಿನಗಳಲ್ಲಿ ಈ ವರೆಗೆ 340 ಮನೆಗಳನ್ನು ಆಶಾ ಹಾಗೂ ನರ್ಸ್‌ಗಳಿಂದ ಸಮೀಕ್ಷೆ ನಡೆಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ ತಿಳಿಸಿದ್ದಾರೆ. ‘ಸರ್ವೇ ಸಂದರ್ಭದಲ್ಲಿ ಜನರಲ್ಲಿ ಅನಾರೋಗ್ಯ ಕಂಡು ಬಂದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಜತೆಗೆ ಜಿಲ್ಲಾ ಮಲೇರಿಯಾ ಅಧಿಕಾರಿಗಳ ಡಾ.ಸೊಪ್ಪಿಮಠ ನೇತೃತ್ವದಲ್ಲಿ ಜನರಲ್ಲಿರು ಜ್ವರ ಹಾಗೂ ನೀರಲ್ಲಿರುವ ಲಾರ್ವಾ ಸಮೀಕ್ಷೆ ಕಾರ್ಯ ನಡೆದಿದ್ದು ಸ್ಥಳದಲ್ಲಿಯೇ ಇದ್ದು ಗ್ರಾಮಸ್ಥರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.