ADVERTISEMENT

ಯುವತಿಗೆ ಕೊರೊನಾ ಸೋಂಕು ದೃಢ

ಜಿಲ್ಲೆಯಲ್ಲಿ 16ಕ್ಕೇರಿದ ಕೋವಿಡ್‌–19 ಪ್ರಕರಣಗಳು: ಆರು ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:22 IST
Last Updated 2 ಜೂನ್ 2020, 15:22 IST

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಮತ್ತೊಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ. ಮುಂಬೈನಿಂದ ತಂದೆ-ತಾಯಿಯೊಂದಿಗೆ ಜಿಲ್ಲೆಗೆ ಬಂದಿದ್ದ ಖಾಸಗಿ ಕಂಪನಿಯ ಉದ್ಯೋಗಿ 24 ವರ್ಷದ ಯುವತಿಗೆ (P-3730) ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಮೂಲತಃ ಶಿಗ್ಗಾವಿ ಪಟ್ಟಣದ ನಿವಾಸಿಯಾದ ಇವರು ಮುಂಬೈನಿಂದ ಬಂದಿದ್ದರು. ಮೇ 31ರಂದು ಯುವತಿಯ ತಂದೆಗೆ (P-3271) ಸೋಂಕು ದೃಢಪಟ್ಟಿತ್ತು. ಇಂದಿನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 16 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಆರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಪ್ರವಾಸ ಹಿನ್ನೆಲೆ:

ADVERTISEMENT

ಮುಂಬೈನ ಸಿದ್ಧಿವಿನಾಯಕ ಚಾಳ ಸಾಂತಾಕ್ರೂಸ್‍ನಲ್ಲಿ ತಂದೆ-ತಾಯಿಯೊಂದಿಗೆ 24 ವರ್ಷದ P-3730 ವಾಸವಾಗಿದ್ದು, ಅಂಧೇರಿಯ ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಓಲಾ ಕಂಪನಿಯ ಕಾರನ್ನು ಬಾಡಿಗೆಗೆ ಪಡೆದು ಮೇ 19ರಂದು ಮುಂಬೈನಿಂದ ಹೊರಟು ಪೂನಾ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್‌ಪೋಸ್ಟ್‌ಗೆ ಅಂದು ರಾತ್ರಿ 9.30ಕ್ಕೆ ಆಗಮಿಸಿದ್ದರು.

ಇವರನ್ನು ವೈದ್ಯಕೀಯ ತಪಾಸಣೆ ನಂತರ ಜಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 24ರಂದು ಗಂಟಲು ದ್ರವ ಪರೀಕ್ಷೆಗೆ ಕಳಹಿಸಲಾಗಿತ್ತು. ಜೂನ್ 2ರಂದು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಕ್ಕಿನಕಟ್ಟೆ ರಾಣಿ ಚನ್ನಮ್ಮ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಈಗಾಗಲೇ ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಜಕಿನಕಟ್ಟಿ ಗ್ರಾಮವನ್ನು ‘ಬಫರ್ ಜೋನ್’ ಎಂದು ಗುರುತಿಸಲಾಗಿದೆ. ಶಿಗ್ಗಾವಿ ತಾಲ್ಲೂಕು ತಹಶೀಲ್ದಾರ್‌ ಅವರನ್ನು ಇನ್ಸಿಡೆಂಟ್‌ ಕಮಾಂಡರ್ ಎಂದು ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.