
ಹಾವೇರಿ: ‘ಭ್ರಷ್ಟಾಚಾರ ಎಂಬುದು ಸಮಾಜಕ್ಕೆ ಅಂಟಿಕೊಂಡಿರುವ ದೊಡ್ಡ ಕಳಂಕವಾಗಿದೆ. ಇತ್ತೀಚಿನ ದಿನಗಳಲ್ಲಿ ಜನನ ಪ್ರಮಾಪತ್ರದಿಂದ ಮರಣ ಪ್ರಮಾಣ ಪತ್ರ ಪಡೆಯುವರೆಗೂ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿರುವುದು ಕಳವಳಕಾರಿ ಸಂಗತಿ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ದೇವೆಂದ್ರಪ್ಪ ಎನ್. ಬಿರಾದಾರ ಹೇಳಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭ್ರಷ್ಟಾಚಾರ ಎಲ್ಲಿ ? ಯಾವಾಗ ? ಹೇಗೆ ಆರಂಭವಾಯಿತು ? ಇದರ ನಿರ್ಮೂಲನೆ ಸಾಧ್ಯವೇ ? ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಏನು ? ಎಂಬುದರ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೇರೆಯವರ ಜೀವನದೊಂದಿಗೆ ನಮ್ಮ ಜೀವನ ಹೋಲಿಕೆ ಮಾಡಿಕೊಂಡು ಬದುಕುವುದು ಹಾಗೂ ಬೇಗ ಶ್ರೀಮಂತನಾಗಬೇಕೆಂಬ ವ್ಯಾಮೋಹಗಳಿಂದ ಭ್ರಷ್ಟಾಚಾರ ಮನೋಭಾವ ಉಂಟಾಗುತ್ತಿದೆ. ಮೊದಲು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಇರುವುದರಲ್ಲಿ ನೆಮ್ಮದಿಯ ಜೀವನ ಮಾಡಬೇಕು. ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸಾರ್ವಜನಿಕ ಸೇವೆ ಮಾಡಬೇಕು’ ಎಂದು ಹೇಳಿದರು.
ಭ್ರಷ್ಟಾಚಾರದಲ್ಲಿ ಭಾರತಕ್ಕೆ 56ನೇ ಸ್ಥಾನ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಭ್ರಷ್ಟಾಚಾರದಲ್ಲಿ ಜಗತ್ತಿನ 186 ದೇಶಗಳ ಪೈಕಿ ಭಾರತ 56ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರ ತಡೆಗೆ ಲೋಕಾಯುಕ್ತ ವ್ಯವಸ್ಥೆಯಿದೆ. ಒಂದು ಕಾಲದಲ್ಲಿ ಲೋಕಾಯುಕ್ತ ವೆಂಕಟಾಚಲ ಅವರು ಮನೆ ಮನೆಗೆ ತೆರಳಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಿದ್ದರು. ಭ್ರಷ್ಟಾಚಾರ ನಿರ್ಮೂಲನೆ ಮಾಡಿದಾಗ ಮಾತ್ರ ವಿಕಸಿತ ಭಾರತ ಸಾಧ್ಯವಾಗುತ್ತದೆ’ ಎಂದರು.
‘ಭ್ರಷ್ಟಾಚಾರ ಕ್ಯಾನ್ಸರ್‌ನಂತೆ ಹರಡುತ್ತಿದೆ. ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಸಾಕಷ್ಟು ಸದ್ದು ಮಾಡುತ್ತಿವೆ. ಜಿಲ್ಲೆಯಲ್ಲಿ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಸರ್ಕಾರಿ ಅಧಿಕಾರಿಗಳು– ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ. ಹಾನಗಲ್ ತಾಲ್ಲೂಕಿನಲ್ಲಿ ಪಹಣಿ ದುರಸ್ತಿಗಾಗಿ ಲಂಚದ ಬೇಡಿಕೆ ಇಟ್ಟಿದ್ದ ಕಂದಾಯ ಇಲಾಖೆ ನೌಕರರು ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ಇದೊಂದು ವಿಷಾದಕರ ಸಂಗತಿ. ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ. ಕೆಲಸ ವಿಳಂಬ ಮಾಡುತ್ತಾರೆ ಎಂಬ ದೂರುಗಳಿವೆ. ನೌಕರರು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು’ ಎಂದರು.
ಲೋಕಾಯುಕ್ತ ಪೊಲೀಸ್ ಎಸ್‌ಪಿ ಎಂ.ಎಸ್. ಕೌಲಾಪುರೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಮಧುಸೂದನ ಸಿ., ಎಸ್‌ಪಿ ಯಶೋಧಾ ವಂಟಗೋಡಿ, ನ್ಯಾಯಾಧೀಶರಾದ ಶ್ರೀಶೈಲಜಾ ಎಚ್.ಎ., ಹೆಚ್ಚುವರಿ ಜಿಲ್ಲಾಧಿಕಾರಿ ಎಲ್. ನಾಗರಾಜ್ ಇದ್ದರು.
‘ದೇಶದ ಆರ್ಥಿಕತೆಗೆ ಹಿನ್ನಡೆ’
‘ಭ್ರಷ್ಟಾಚಾರದಿಂದಾಗಿ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತಿದೆ. ಭ್ರಷ್ಟಾಚಾರದಿಂದ ಸರ್ಕಾರದ ಅಧಿಕಾರಿ ಹಾಗೂ ಸಿಬ್ಬಂದಿಯವರು ಸಾರ್ವಜನಿಕರ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ನ್ಯಾಯಾಧೀಶ ದೇವೆಂದ್ರಪ್ಪ ಎನ್. ಬಿರಾದಾರ ಹೇಳಿದರು.
‘ಭ್ರಷ್ಟಾಚಾರವೆಂದರೆ ಕೇವಲ ಹಣ ಪಡೆಯುವುದಲ್ಲ. ವಸ್ತುಗಳ ಬೇಡಿಕೆ ಇತರೆ ಕೆಲಸಗಳಿಗೆ ವಸೂಲಿ ಲಾಭದ ಕೆಲಸಕ್ಕೆ ಬೇಡಿಕೆ... ಹೀಗೆ ಹಲವು ಬೇಡಿಕೆ ಇರಿಸುವುದು ಸಹ ಭ್ರಷ್ಟಾಚಾರ. ಲೋಕಾಯುಕ್ತ ಪೊಲೀಸರು ಹಾಗೂ ಪೊಲೀಸ್ ಇಲಾಖೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ಭಯವಿರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.