‘ಕೋವಿಡ್ ಪಾಸಿಟಿವ್’ ಎಂದರೆ ಬಹುತೇಕರು ಬೆಚ್ಚಿ ಬೀಳುತ್ತಾರೆ. ನಿಜ ಹೇಳಬೇಕೆಂದರೆ, ನನಗೆ ಸ್ವಚ್ಛತೆಯ ಪಾಠ ಮತ್ತು ಆರೋಗ್ಯ ಕಾಳಜಿಯನ್ನು ‘ಕೋವಿಡ್’ ಕಲಿಸಿದೆ. ಅಷ್ಟೇ ಅಲ್ಲ, ಬದುಕುವ ರೀತಿಯನ್ನೂ ತಿಳಿಸಿಕೊಟ್ಟಿದೆ ಎನ್ನುತ್ತಾರೆ ಕೋವಿಡ್ ಗೆದ್ದು ಬಂದ ಬ್ಯಾಡಗಿ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಬೀರಪ್ಪ ಹುಲಿಹಳ್ಳಿ.
ನನ್ನ ಐದು ವರ್ಷದ ಮಗನಿಗೆ ಜಾಂಡಿಸ್ ಆಗಿತ್ತು. ಆದ ಕಾರಣ, ನಾನು ಎರಡು ದಿನ ರಜೆ ಹಾಕಿ, ಬ್ಯಾಡಗಿಯಿಂದ ಮಲೆಬೆನ್ನೂರಿಗೆ ಹೋದೆ. ಅಲ್ಲಿಂದ ಮಗ ಮತ್ತು ಪತ್ನಿಯನ್ನು ಕರೆದುಕೊಂಡು, ಹರಿಹರದಲ್ಲಿ ಖಾಸಗಿ ಆಸ್ಪತ್ರೆಗೆ ತೋರಿಸಿ, ರಕ್ತ ಪರೀಕ್ಷೆ ಮಾಡಿಸಿದೆ. ಒಂದು ವಾರ ಬಿಟ್ಟು ಬರುವಂತೆ ವೈದ್ಯರು ತಿಳಿಸಿದರು. ನಂತರ ಸ್ವ–ಗ್ರಾಮ ಕದರಮಂಡಲಗಿಗೆ ಬಂದೆವು.
ಜೂನ್ 12ರಂದು ಮತ್ತೆ ಹರಿಹರಕ್ಕೆ ಹೋಗಿ ಬಂದೆ. ಅಂದು, ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಎಲ್ಲ ಸಿಬ್ಬಂದಿಯೂ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡೆವು. ನಂತರ ಎರಡು ದಿನ ತಹಶೀಲ್ದಾರ್ ಕಚೇರಿ ಮತ್ತು ಬ್ಯಾಡಗಿ ಎಪಿಎಂಸಿಯಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ್ದೆ. ಜೂನ್ 14ರಂದು ರಾತ್ರಿ ಮನೆಯಲ್ಲಿ ಊಟ ಮಾಡುವ ವೇಳೆ ಸಬ್ ಇನ್‌ಸ್ಟೆಕ್ಟರ್ ಕರೆ ಮಾಡಿ, ‘ಪಾಸಿಟಿವ್’ ಬಂದಿರುವ ವಿಷಯ ತಿಳಿಸಿದರು.
ನಮ್ಮದು ಅವಿಭಕ್ತ ಕುಟುಂಬವಾಗಿದ್ದು, ಒಟ್ಟು 22 ಮಂದಿ ಇದ್ದೇವೆ. ಇವರಲ್ಲಿ 12 ವರ್ಷದೊಳಗಿನ 9 ಮಕ್ಕಳು ಇದ್ದಾರೆ. ಹಾಗಾಗಿ ಮಕ್ಕಳು ಮತ್ತು ವಯಸ್ಸಾದ ತಂದೆ–ತಾಯಿ ಬಗ್ಗೆ ಆತಂಕ ಉಂಟಾಯಿತು. ನನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಕುಟುಂಬಸ್ಥರು ಮತ್ತು 45 ಸಹೋದ್ಯೋಗಿಗಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಯಿತು. ದೇವರ ದಯೆಯಿಂದ ಎಲ್ಲರ ವರದಿಗಳೂ ‘ನಗೆಟಿವ್’ ಬಂದಿತು. ಆಗ ನಾನು ಸಂಪೂರ್ಣ ನಿರಾಳನಾದೆ.
ಕೋವಿಡ್‌ಗೆ ಔಷಧವೇ ಇಲ್ಲ ಅಂತಾರೆ. ಹಾಗಾದರೆ ನಮ್ಮಂಥ ಎಷ್ಟೋ ಮಂದಿ ಆಸ್ಪತ್ರೆಗೆ ಹೋಗಿ ಗುಣಮುಖರಾಗಿ ಬರುತ್ತಿರುವುದು ಸುಳ್ಳಾ..? ನಿಜ ಅಂದ ಮೇಲೆ, ಚಿಕಿತ್ಸೆ ಖಂಡಿತ ಇದೆ. ಹೆದರುವ ಅಗತ್ಯವಿಲ್ಲ. ಆತ್ಮಸ್ಥೈರ್ಯವನ್ನು ಎಂದಿಗೂ ಕಳೆದುಕೊಳ್ಳಬಾರದು. ಚಿಕಿತ್ಸೆಗಿಂತ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೆ, ಕೊರೊನಾ ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.