
ರಾಣೆಬೆನ್ನೂರು: ಭಾರತದ ಪರಂಪರೆ, ಚರಿತ್ರೆಯಲ್ಲಿ ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜಿಸಲಾಗುತ್ತಿದೆ. ಗೋವುಗಳನ್ನು ನಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಜೊತೆಗೆ ಕಾಮಧೇನು ಎಂದೇ ಕರೆಯಲಾಗುತ್ತಿದೆ. ಒಂದು ಹಸು ಮನೆಯಲ್ಲಿದ್ದರೆ ಲಕ್ಷ್ಮಿ ವಾಸವಿದ್ದಂತೆ ಎಂಬ ನಂಬಿಕೆ ಭಾರತೀಯರದ್ದಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾಲ್ಲೂಕಿನ ಐರಾವತ ಕ್ಷೇತ್ರ ಎಂದು ಪ್ರಸಿದ್ದಿ ಪಡೆದಿರುವ ಸುಕ್ಷೇತ್ರ ಐರಣಿಯ ಹೊಳೆಮಠದಲ್ಲಿ ಭಾನುವಾರ ಮಠದಿಂದ 11 ಎಕರೆ ಜಮೀನಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗೋ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಭಾರತದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಗೋಶಾಲೆಗಳಿವೆ. ಅಲ್ಲಿಯ ಕೃಷಿಕರು ವಯಸ್ಸಾದ ಹಸುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡದೇ ಗೋಶಾಲೆಗೆ ದಾನ ಮಾಡುತ್ತಾರೆ. ಇದರಿಂದ ಗೋವುಗಳ ರಕ್ಷಣೆಯಾಗುತ್ತದೆ. ಗೋವುಗಳನ್ನು ಪ್ರತಿಯೊಬ್ಬರು ರಕ್ಷಿಸಬೇಕು ಎಂದರು.
ಅದೇ ಮಾದರಿಯಲ್ಲಿ ಗೋವುಗಳನ್ನು ರಕ್ಷಣೆ ಮಾಡಲು ಐರಣಿ ಹೊಳೆಮಠದ ಸ್ವಾಮೀಜಿ ಅವರು ಗೋಶಾಲೆ ತೆರೆದಿರುವುದು ಸಂತಸ ತಂದಿದೆ. ರೈತರು ಹಸುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡದೇ ಶ್ರೀಮಠದ ಗೋಶಾಲೆಗೆ ದಾನ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳಬೇಕು. ಮಠದ ಅಭಿವೃದ್ಧಿ ಹಿನ್ನೆಲೆಯಲ್ಲಿ ನೀಡಿದ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಗೋವುಗಳು ಶ್ರೀಮಠಕ್ಕೆ ಮುಕುಟವಿದ್ದಂತೆ. ಸಾವಯವ ಕೃಷಿಗೆ ಪ್ರಮುಖವಾಗಿ ಅಗತ್ಯವಿರುವುದು ಶೆಗಣಿ. ಇಂತಹ ಮಾನವ ಹಿತವಾದ ಎಲ್ಲ ವಸ್ತುಗಳನ್ನು ನೀಡುವ ಗೋವುಗಳ ರಕ್ಷಣೆ ಅಗತ್ಯ ಎಂದರು.
ಐರಣಿಯ ಹೊಳೆಮಠ ಸ್ಥಾಪನೆಯ ಕಾಲದಿಂದಲೂ ಲಿಂ.ಮುಪ್ಪಿನಾರ್ಯ ಸ್ವಾಮೀಜಿ ಅವರು ಗೋವುಗಳನ್ನು ಸಾಕಿದ್ದರು. ಪ್ರಸ್ತುತ ಶ್ರೀಗಳು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಪಾಲನೆ ಪೋಷಣೆ ಮಾಡಲು ಮುಂದಾಗಿದ್ದಾರೆ ಎಂದರು.
ಮಠದ ಪೀಠಾಧಿಪತಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮತ್ತು ಉತ್ತರಾಧಿಕಾರಿ ಸಿದ್ಧಾರೂಢ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ, ಜೋಳಪ್ಪ ಕಸವಾಳ, ಸಿದ್ಧನಗೌಡ ಗೋವಿಂದಗೌಡ್ರ, ಬಾಬಣ್ಣ ಐರಣಿಶೆಟ್ಟರ, ಭಾರತಿ ಜಂಬಗಿ, ಪವನಕುಮಾರ ಮಲ್ಲಾಡದ, ಮಂಜುನಾಥ ಓಲೇಕಾರ, ಸಂತೋಷಕುಮಾರ ಪಾಟೀಲ, ಸತೀಶಗೌಡ ಮಲ್ಲನಗೌಡ್ರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.