ADVERTISEMENT

ಹೋರಿ ಹಬ್ಬ: 20ಕ್ಕೂ ಹೆಚ್ಚು ಜನರಿಗೆ ಗಾಯ, ಆಯೋಜಕರಿಂದ ನಿರ್ಲಕ್ಷ್ಯ ಆರೋಪ

ಮುಂಜಾಗ್ರತಾ ಕ್ರಮವಿಲ್ಲದೆ ಅವಘಡ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:15 IST
Last Updated 30 ನವೆಂಬರ್ 2021, 4:15 IST
ಬಸಾಪೂರ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಹೋರಿ ಹಿಡಿಯಲು ಜನರ ಹರಸಾಹಸ
ಬಸಾಪೂರ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಹೋರಿ ಹಿಡಿಯಲು ಜನರ ಹರಸಾಹಸ   

ಗುತ್ತಲ: ಬಸಾಪೂರ ಗ್ರಾಮದ ಹೊರ ವಲಯದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಹೋರಿ ಹಬ್ಬದಲ್ಲಿ ಹೋರಿ ತಿವಿದು20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಏಳು ಜನರ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ,ಹಾವೇರಿ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ನಡೆದ ಹೋರಿ ಹಬ್ಬಕ್ಕೆ ತಮಿಳುನಾಡು,ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಒಟ್ಟು 2ಲಕ್ಷಕ್ಕೂ ಜನ ಸೇರಿದ್ದರು. ‌ಇದರಲ್ಲಿ ಹಲವರು ಗಾಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 12ಕ್ಕೆ ಹೋರಿ ಹಿಡಿಯುವ ಸ್ಪರ್ಧೆಯನ್ನು ನಿಲ್ಲಿಸಲಾಯಿತು.
ದುರಂತ ಸಂಭವಿಸುತ್ತಿದ್ದಂತೆಯೇ ಆಯೋಜಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ADVERTISEMENT

ಹೋರಿ ಹಬ್ಬ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಅಭಿಮಾನಿಗಳು ಸ್ಪರ್ಧೆ ಆಯೋಜಿಸಿದ್ದ ಗ್ರಾಮ ಸಮಿತಿ ಸದಸ್ಯರಿಗೆ ಕಲ್ಲು ತೂರಾಟ ನಡೆಸಿದರು.

ಬೆಳಿಗ್ಗೆ 10ರಿಂದ 12ಕ್ಕೆ ಕೆಲವು ಹೋರಿಗಳನ್ನು ಬಿಡಲಾಯಿತು. ಸರದಿಯಲ್ಲಿದ್ದ ಹೋರಿಗಳನ್ನು ಬಿಡದೆ ಮಧ್ಯದಲ್ಲಿ ಬಂದ ಹೋರಿಗಳನ್ನು ಬಿಡಲಾಗುತ್ತಿತ್ತು. ಮಧ್ಯದಲ್ಲಿ ಬರುವ ಹೋರಿಗಳನ್ನು ಹತೋಟಿ ಮಾಡಲು ಸಮಿತಿಯವರು ವಿಫಲರಾದರು. ಇದನ್ನು ಕಂಡ ಹೊರಿ ಮಾಲೀಕರು ಸಮಿತಿಯವರನ್ನು ತರಾಟೆಗೆ ತೆಗೆದುಕೊಂಡರು. ಕೊನೆ ಗಳಿಗೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲಾಗದೆ ಹಬ್ಬ ಬಂದ್ ಮಾಡಲಾಯಿತು.

‘ಆಯೋಜಕರು ಪೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಹಣ ಸಹ ಹಿಂದಿರುಗಿಸಿಲ್ಲ. ₹ ಎರಡು ಸಾವಿರ ಪ್ರವೇಶ ಶುಲ್ಕ ಪಡೆದಿದ್ದಾರೆ. ಅಖಾಡಕ್ಕೆ ಬಿಡದೆ ಹೊರಿ ಮಾಲಿಕರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಹೋರಿ ಮಾಲೀಕ ರಾಖೇಶ ತಳಗೇರಿ ಲಕ್ಕಿಕೊಪ್ಪ ದೂರಿದರು.

‘ಬಸಾಪೂರ ಗ್ರಾಮದವರು ದುಡ್ಡು ಮಾಡುವ ಉದ್ದೇಶದಿಂದ ಹೋರಿ ಹಬ್ಬವನ್ನು ಆಯೋಜಿಸಿದ್ದಾರೆ. ಅಭಿಮಾನಿಗಳಿಗೆ ಮತ್ತು ಹೋರಿ ಮಾಲೀಕರಿಗೆ ಹಾಗೂ ಹಿಡಿಯುವವರಿಗೆ ಮೋಸ ಮಾಡಿದ್ದಾರೆ. 200 ಕಿ.ಮೀ.ದೂರದಿಂದ ಬಂದಿದ್ದೇವೆ ನಮ್ಮ ಖರ್ಚು ಕೊಡುವವರು ಯಾರು’ ಎಂದು ಹೋರಿ ಹಿಡಿಯುವ ಜಗದೀಶ ಕುರಬರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.