ADVERTISEMENT

ಕಿಷ್ಕಿಂಧೆಯಿಂದ ಅಯೋಧ್ಯೆಗೆ ‘ಸೈಕಲ್‌ ಯಾತ್ರೆ’

ಕೊರೊನಾ ಮುಕ್ತ ಭಾರತಕ್ಕೆ ಸಂಕಲ್ಪ: 18 ದಿನಗಳಲ್ಲಿ 2 ಸಾವಿರ ಕಿ.ಮೀ. ಸೈಕ್ಲಿಂಗ್‌

ಸಿದ್ದು ಆರ್.ಜಿ.ಹಳ್ಳಿ
Published 3 ಮೇ 2021, 16:37 IST
Last Updated 3 ಮೇ 2021, 16:37 IST
‘ಸೈಕಲ್‌ ಯಾತ್ರೆ’ ಮೂಲಕ ಅಂಜನಾದ್ರಿ ಬೆಟ್ಟದಿಂದ ಅಯೋಧ್ಯೆ ತಲುಪಿರುವ ಚಿತ್ರದುರ್ಗದ ಕರಿಯಣ್ಣ, ಹಾವೇರಿಯ ವಿವೇಕ್‌ ಇಂಗಳಗಿ ಹಾಗೂ ಹೈದರಾಬಾದ್‌ನ ಮುಡಾವತ್‌ ವರಪ್ರಸಾದ್‌. 
‘ಸೈಕಲ್‌ ಯಾತ್ರೆ’ ಮೂಲಕ ಅಂಜನಾದ್ರಿ ಬೆಟ್ಟದಿಂದ ಅಯೋಧ್ಯೆ ತಲುಪಿರುವ ಚಿತ್ರದುರ್ಗದ ಕರಿಯಣ್ಣ, ಹಾವೇರಿಯ ವಿವೇಕ್‌ ಇಂಗಳಗಿ ಹಾಗೂ ಹೈದರಾಬಾದ್‌ನ ಮುಡಾವತ್‌ ವರಪ್ರಸಾದ್‌.    

ಹಾವೇರಿ: ಹನುಮನ ಜನ್ಮಭೂಮಿ ‘ಕಿಷ್ಕೆಂಧೆ’ಯಿಂದ ರಾಮ ಜನ್ಮಭೂಮಿ ‘ಅಯೋಧ್ಯೆ’ವರೆಗಿನ 2 ಸಾವಿರ ಕಿ.ಮೀ. ಅಂತರವನ್ನು ಕೇವಲ 18 ದಿನಗಳಲ್ಲಿ ‘ಸೈಕಲ್‌ ಯಾತ್ರೆ’ ಮೂಲಕ ಯಶಸ್ವಿಯಾಗಿ ತಲುಪಿದ್ದಾರೆ ಹಾವೇರಿಯ ವಿವೇಕ ಇಂಗಳಗಿ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸಯಳನಾಡಿನ ಕರಿಯಣ್ಣ.

‘ಕೊರೊನಾ ಮುಕ್ತ ಭಾರತದ ಸಂಕಲ್ಪ’ ಮತ್ತು ‘ಜೀವಜಲ ಉಳಿವಿಗಾಗಿ ಹೋರಾಟ’ ಎಂಬ ಧ್ಯೇಯಗಳೊಂದಿಗೆ ಸೈಕಲ್‌ ಯಾತ್ರೆಯನ್ನು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದಏಪ್ರಿಲ್‌ 13ರಂದು ಕೈಗೊಂಡ ಈ ಉತ್ಸಾಹಿ ಯುವಕರು, ಏಪ್ರಿಲ್‌ 30ರಂದು ಉತ್ತರ ಪ್ರದೇಶದ ಅಯೋಧ್ಯೆ ನಗರವನ್ನುತಲುಪಿದ್ದಾರೆ.

ಇವರ ಯಾತ್ರೆಯ ಹಾದಿಯಲ್ಲಿ ಹೈದರಾಬಾದ್‌ನಲ್ಲಿ ಅನಿರೀಕ್ಷಿತವಾಗಿ ಜೊತೆಯಾದವರು ಮುಡಾವತ್‌ ವರಪ್ರಸಾದ್‌ ಎಂಬ ಮತ್ತೊಬ್ಬ ಸೈಕ್ಲಿಸ್ಟ್‌. ಈ ಮೂವರು ಎಲ್‌ಎಲ್‌ಬಿ ವಿದ್ಯಾರ್ಥಿಗಳು. ವಿವೇಕ್‌ ಅವರು ಬಿಜೆಪಿ ಯುವ ಮೋರ್ಚಾ ಹಾವೇರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಕರಿಯಣ್ಣ ಅವರು ‘ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ’ದ ಅಧ್ಯಕ್ಷರಾಗಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

‘ಅಂಜನಾದ್ರಿ ಬೆಟ್ಟದಿಂದ ಹೊರಟ ನಾವು ಹೊಸಪೇಟೆ, ರಾಯಚೂರು, ಹೈದರಾಬಾದ್‌, ನಿಜಾಮಬಾದ್‌, ಅದಿಲಾಬಾದ್‌, ನಾಗಪುರ, ಜಬಲ್‌ಪುರ, ಪ್ರಯಾಗ್‌ರಾಜ್‌, ಸುಲ್ತಾನ್‌ಪುರ ಮಾರ್ಗವಾಗಿ ಅಯೋಧ್ಯೆ ತಲುಪಿದೆವು. 25 ದಿನಗಳು ಬೇಕಾಗಬಹುದು ಎಂದುಕೊಂಡಿದ್ದೆವು, ಆದರೆ, 18 ದಿನಗಳಲ್ಲೇ ಯಾತ್ರೆ ಮುಗಿಸಿದೆವು.₹286 ಹಣದೊಂದಿಗೆ ಹೊರಟ ನನಗೆ ಸ್ನೇಹಿತರಿಂದ ₹15 ಸಾವಿರ ನೆರವು ಹರಿದು ಬಂತು’ ಎಂದು ಹಾವೇರಿಯ ವಿವೇಕ್‌ ಇಂಗಳಗಿ ಖುಷಿ ಹಂಚಿಕೊಂಡರು.

‘ಬೆಳಿಗ್ಗೆ 5ರಿಂದ 9, ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಹಾಗೂ ಸಂಜೆ 5ರಿಂದ ರಾತ್ರಿ 10... ಹೀಗೆ ಮೂರು ಸುತ್ತುಗಳಲ್ಲಿ ಸೈಕಲ್‌ ಯಾತ್ರೆ ನಡೆಯುತ್ತಿತ್ತು.ಆರ್‌.ಎಸ್‌.ಎಸ್‌. ಕೇಂದ್ರ, ದೇವಸ್ಥಾನ, ಬಸ್‌ ನಿಲ್ದಾಣ, ಕೆಲವೊಮ್ಮೆ ರಸ್ತೆಬದಿಯಲ್ಲೇ ವಸತಿ ಹೂಡುತ್ತಿದ್ದೆವು. ಮಧ್ಯಪ್ರದೇಶದ ‘ಪೆಂಚ್‌ ನ್ಯಾಷನಲ್‌ ಪಾರ್ಕ್‌ ’ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ 180 ಕಿ.ಮೀ. ಸೈಕ್ಲಿಂಗ್‌ ಮಾಡಿ, ಜನವಸತಿ ಪ್ರದೇಶ ತಲುಪಬೇಕಾಯಿತು’ ಎಂದು ಯಾತ್ರೆಯ ಅನುಭವವನ್ನು ಬಿಚ್ಚಿಟ್ಟರು.

‘ಕೊರೊನಾ ಮುಕ್ತ ಭಾರತಕ್ಕಾಗಿ ಶ್ರೀರಾಮ ಮತ್ತು ಆಂಜನೇಯನನ್ನು ಪ್ರಾರ್ಥಿಸಿದ್ದೇವೆ.ಮಹಾರಾಷ್ಟ್ರ ಗಡಿ ಪ್ರವೇಶಿಸುವ ಮುನ್ನ ಕೋವಿಡ್‌ ಪರೀಕ್ಷೆ (ಆರ್‌.ಎ.ಟಿ) ಮಾಡಿಸಿಕೊಂಡಾಗ ಮೂವರ ಫಲಿತಾಂಶ ನೆಗೆಟಿವ್‌ ಬಂದಿತು. ಕೋವಿಡ್‌ ಸಂದರ್ಭದಲ್ಲೂ ಎಲ್ಲಿಯೂ ಸಮಸ್ಯೆಯಾಗಲಿಲ್ಲ.ಮಾರ್ಗದುದ್ದಕ್ಕೂ ಜನರಿಂದ ಉತ್ತಮ ಬೆಂಬಲ ಸಿಕ್ಕಿತು’ ಎಂದು ಕರಿಯಣ್ಣ ಹೇಳಿದರು.

‘ಅಭಿವೃದ್ಧಿಗಾಗಿ ಮೋದಿ ಭೇಟಿ ಯತ್ನ’

‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇವೆ. ಭೇಟಿಗೆ ಅನುಮತಿ ಸಿಕ್ಕ ತಕ್ಷಣ ಅಯೋಧ್ಯೆಯಿಂದ ಗೋರಖ್‌ಪುರ ಮತ್ತು ದೆಹಲಿಗೆ ಸೈಕಲ್‌ನಲ್ಲೇ ಹೋಗುತ್ತೇನೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮೋದಿ ಅವರಲ್ಲಿ ಮನವಿ ಸಲ್ಲಿಸುತ್ತೇನೆ’ ಎಂದು ಹಾವೇರಿಯ ವಿವೇಕ್‌ ಇಂಗಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.