ADVERTISEMENT

ಹೆಜ್ಜೆ ಕುಣಿದಾಡಿದವುಮನಸು ಮಾತಾಡಿದವು

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 18:21 IST
Last Updated 6 ಜನವರಿ 2023, 18:21 IST
ಸಮ್ಮೇಳನದ ಪಾಪು–ಚಂಪಾ ವೇದಿಕೆಯಲ್ಲಿ ಹಾವೇರಿಯ ಮಕರಂದ ಕಲಾ ಸಂಸ್ಥೆಯಿಂದ ಪ್ರಸ್ತುತಪಡಿಸಿದ ಸಮೂಹ ನೃತ್ಯ  –ಪ್ರಜಾವಾಣಿ ಚಿತ್ರ 
ಸಮ್ಮೇಳನದ ಪಾಪು–ಚಂಪಾ ವೇದಿಕೆಯಲ್ಲಿ ಹಾವೇರಿಯ ಮಕರಂದ ಕಲಾ ಸಂಸ್ಥೆಯಿಂದ ಪ್ರಸ್ತುತಪಡಿಸಿದ ಸಮೂಹ ನೃತ್ಯ  –ಪ್ರಜಾವಾಣಿ ಚಿತ್ರ    

ಕನಕ–ಶರೀಫ–ಸರ್ವಜ್ಞ ವೇದಿಕೆ, ಹಾವೇರಿ: ತಣ್ಣನೆಯ ಕುಳಿರ್ಗಾಳಿ ಒಂದೆಡೆ. ಪರಿಸರದ ತುಂಬೆಲ್ಲ ಕನ್ನಡದ ಶಾರೀರ ಮತ್ತು ಗೆಜ್ಜೆನಾದ. ಮೈಮರೆಯುವಂತೆ ಊರು, ಮನೆ ಎಲ್ಲವನ್ನೂ ಮರೆತು ಮಗ್ನರಾದ ನೋಡುಗರು.

ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಕುಳಿತವರು, ಓಡಾಡಿ ದಣಿದವರು, ಎಲ್ಲರೂ ರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುವಾಗ ತಮ್ಮೊಳಗೆ ತಾವು ಒಂದಾಗಿ ಹೋದರು.

ಹೆಜ್ಜೆಯ ಗೆಜ್ಜೆ ನಾದ ಎಲ್ಲರೂ ತಾಳ ಹಾಕುವಂತೆಮಾಡಿದವು. ಏನ್‌ ಕೊಡ ಏನ್‌ ಕೊಡವ ಹಾಡು, ತತ್ವಜ್ಞಾನದಲ್ಲಿ ತಮ್ಮ ಬದುಕಿನೊಂದಿಗೆ ಸಂವಾದ ಮಾಡಿಕೊಂಡಂತೆ ಕಣ್ತುಂಬಿಕೊಳ್ಳುತ್ತಿದ್ದರು.

ADVERTISEMENT

ಎಲ್ಲಿ ಕಾಣ್‌..ಎಲ್ಲಿ ಕಾಣೆನು.. ಹಾಡುತ್ತ ಜೋಗತಿ ನೃತ್ಯವಾಡುತ್ತಿದ್ದರೆ ಬದುಕಿನ ಸಮತೋಲನವನ್ನು ಅವರ ತಲೆ ಮೇಲಿದ್ದ ಬಿಂದಿಗೆಗೆ ಹೋಲಿಸಿಕೊಂಡು, ಸೋಜಿಗ ಪಡುತ್ತಿದ್ದರು.

ಸಮ್ಮೇಳನದ ಈ ಕಾರ್ಯಕ್ರಮಗಳು ಮಾನಸೋಲ್ಲಾಸ ಹೆಚ್ಚಿಸಿದ್ದಲ್ಲದೆ, ಆಂತರ್ಯದೊಂದಿಗೆ ಸಂವಾದಿಯಾಗಿಸುವಲ್ಲಿಯೂ ಯಶಸ್ಸು ಪಡೆದವು.

ತೊರೆದು ಜೀವಿಸಬಹುದೆ ಹಾಡು ಹೇಳುತ್ತಿದ್ದರೆ, ಭಕ್ತಿಪಂಥದ ಮೂಲಾಧಾರವಾಗಿರುವ ಸರ್ವಸ್ವವನ್ನೂ ಸಮರ್ಪಿಸಿಕೊಂಡು ಕೇಳುತ್ತಿದ್ದರು.

ಚಿಂತೆಗಳಿದ್ದರೆ ಇದ್ದಾವು, ಇದೀಗ ಎಲ್ಲವನ್ನೂ ದೇವರ ಮೇಲೆ ಭಾರಹಾಕಿ ಹಗುರವಾಗುವ ಎಂಬಂತೆ ತಲ್ಲೀನರಗಿದ್ದರು.

ಡಾ.ಶರ್ಮಿಳಾ ಹಿರೇಮಠ, ತುಷಾರ ಮಾಳಗಿ, ಬಸವರಾಜ ಶಿಗ್ಗಾವಿ ಅವರು ಕುಂಬಾರಕಿ ಹಾಡುವಾಗ ನಭ ಸೇರಿದ ನಾದ ಪರಿಸರದ ತುಂಬೆಲ್ಲ ಹರಡತೊಡಗಿತು. ಹಾಡು ಹಾಡುತ್ತ, ಹಾಡಿನೊಂದಿಗೆ ಹಾಡಾದ ಕಲಾವಿದರು ಶಾಪಗ್ರಸ್ತ ಗಂಧರ್ವರೆಲ್ಲ ಧರೆಗಿಳಿದು, ಹಾಡು ಪ್ರಸ್ತುತಪಡಿಸಿದಂತೆ ಆಗಿತ್ತು.

ನಡುರಾತ್ರಿಯ ಹತ್ತಿರವಾದರೂ ಪ್ರೇಕ್ಷಕರು ಸಮ್ಮೇಳನದ ಸಭಾಂಗಣದಿಂದ ಚದುರಲಿಲ್ಲ. ಎಡ ಬಲ ಎರಡೂ ಕಡೆ ಕುರ್ಚಿ ಎಳೆದುಕೊಂಡು ಕೂರುತ್ತಿದ್ದುದು ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.