ಹಾವೇರಿ: ಜಿಲ್ಲೆಯ ವರದಾ ನದಿ ಪಾತ್ರದ ಸವಣೂರು ಹಾಗೂ ಹಾನಗಲ್ ತಾಲ್ಲೂಕಿನ ವಿವಿಧಗ್ರಾಮಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರ ಪ್ರವಾಹದಿಂದ ತುತ್ತಾಗುವ ನದಿ ಪಾತ್ರದ ತಗ್ಗು ಪ್ರದೇಶದ ಮನ್ನಂಗಿ, ಮೆಳ್ಳಾಗಟ್ಟಿ, ಕುಣಿಮೆಳ್ಳಿಹಳ್ಳಿ, ಹುನುಗಂದ ಗ್ರಾಮಗಳಿಗೆ ಭೇಟಿ ನೀಡಿ, ಮನೆಹಾನಿ ಹಾಗೂ ನದಿ ತೀರದ ಪ್ರದೇಶವನ್ನು ವೀಕ್ಷಿಸಿದರು. ಸ್ಥಳೀಯ ಅಧಿಕಾರಿಗಳಿಗೆ ಗ್ರಾಮಗಳ ಕಾಲುವೆ ಸ್ವಚ್ಛತೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಎಂಜಿನಿಯರ್‌ಗಳಿಗೆ ತಕ್ಷಣ ಸಮೀಕ್ಷೆ ವರದಿ ಸಲ್ಲಿಸಬೇಕು. ಸರ್ಕಾರದ ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.
ಮನೆ ಹಾನಿ: ಡಿ.ಸಿ ಪರಿಶೀಲನೆ
ಶಿಗ್ಗಾವಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ವಿಡಿಯೊ ಸಂವಾದ ನಡೆಸಿ ಮನೆ ಹಾನಿ ಸಮೀಕ್ಷೆ ನಡೆಸಿ ತಕ್ಷಣ ವರದಿ ನೀಡಬೇಕು. ಕಳೆದ ವರ್ಷದಂತೆ ಗೊಂದಲ ಮರುಕಳಿಸಬಾರದು. ಈ ವರ್ಷ ಪುನರಾವರ್ತನೆಯಾದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆ ಮನೆಹಾನಿ ಕುರಿತು ಜಿಲ್ಲಾಡಳಿತ ಪರಿಶೀಲನೆ ಹಮ್ಮಿಕೊಂಡಿದೆ.
ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿನ ಮನೆ ಹಾನಿ ಸಮೀಕ್ಷೆ ನಡೆಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣವರ ನೇತೃತ್ವದ ಅಧಿಕಾರಿಗಳ ತಂಡ ಬಂಕಾಪುರ, ನಾರಾಯಣಪುರ, ಸದಾಶಿವಪೇಟೆ, ಇಹ್ರಾಹಿಂಪುರ ಗ್ರಾಮದಲ್ಲಿ ಮಳೆಯಿಂದ ಮನೆ ಹಾನಿ ಕುರಿತು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಹುನಗುಂದ ಗ್ರಾಮದಲ್ಲಿ ಸುಮಾರು ₹4.5 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕೆರೆಗೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಿದರು. ಬಾಡದ ಬಕಾಸುರ ಕೆರೆಗೆ ಭೇಟಿ ನೀಡಿ ಅಲ್ಲಿನ ನೀರು ಸಂಗ್ರಹ ಸಾಮರ್ಥ್ಯ ಮತ್ತು ಇಲ್ಲಿನ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.
ರೈತರ ಮನವಿ:
ಕಳೆದ ವರ್ಷದ ಬೆಳೆ ಹಾನಿ ಸರಿಯಾಗಿ ಬಿಡುಗಡೆಯಾಗಿಲ್ಲ. ಪ್ರಸಕ್ತ ವರ್ಷದಲ್ಲಿ ಶೇ 40ರಷ್ಟು ಬಿತ್ತನೆಯಾಗಿದ್ದು, ಅದರಲ್ಲಿ ಶೇ 20ರಷ್ಟು ಬೆಳೆ ಜಲಾವೃತಗೊಂಡಿದೆ. ಅದರ ಪರಿಹಾರಧನ ಬಿಡುಗಡೆ ಮಾಡುವಂತ ರೈತರು ಮನವಿ ಮಾಡಿದರು.
ಬೆಳೆ ಹಾನಿಯಾದ ರೈತರು ಅರ್ಜಿ ಸಲ್ಲಿಸಿರಿ. ತಕ್ಷಣ ವಿತರಿಸುವ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕ್ಕಮ್ಮನವರ, ತಾಲ್ಲೂಕು ಪಂಚಾಯ್ತಿ ಇಒ ಪ್ರಶಾಂತ ತುರ್ಕಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.