ADVERTISEMENT

ಹಾವೇರಿ: ದೂದಿಹಳ್ಳಿಯಲ್ಲಿ ಡಿ.ಸಿ ಗ್ರಾಮ ವಾಸ್ತವ್ಯ

‘ಹಳ್ಳಿ ಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ’ ಮಾರ್ಚ್‌ 20ರಂದು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 16:13 IST
Last Updated 17 ಮಾರ್ಚ್ 2021, 16:13 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ‘ಹಳ್ಳಿ ಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ’ ಕ್ರಾರ್ಯಕ್ರಮದ ಅಂಗವಾಗಿ ಮಾರ್ಚ್ 20ರಂದು ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಜಿಲ್ಲಾಧಿಕಾರಿಯವರ ಎರಡನೇ ಗ್ರಾಮ ವಾಸ್ತವ್ಯ ಇದಾಗಿದ್ದು, ಶನಿವಾರ ನಡೆಯಲಿರುವ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾ ಮಟ್ಟದ ಹಾಗೂ ಹಿರೇಕೆರೂರು ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.

ಇದೇ ದಿನ ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಆಯಾ ತಾಲ್ಲೂಕು ತಹಶೀಲ್ದಾರ್‌ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಜರುಗಲಿದೆ. ಬ್ಯಾಡಗಿ ತಾಲ್ಲೂಕಿನ ಘಾಳಪೂಜಿ ಗ್ರಾಮದ ಗ್ರಾ.ಪಂ. ಕಚೇರಿ ಆವರಣ, ಹಾವೇರಿ ತಾಲ್ಲೂಕಿನ ಚನ್ನೂರ, ರಾಣೆಬೆನ್ನೂರು ತಾಲ್ಲೂಕಿನ ಸರ್ವಂದ, ರಟ್ಟೀಹಳ್ಳಿ ತಾಲ್ಲೂಕಿನ ಇಂಗಳಗೊಂದಿ, ಸವಣೂರ ತಾಲ್ಲೂಕಿನ ಕಲಕೋಟಿ, ಶಿಗ್ಗಾವಿ ತಾಲ್ಲೂಕಿನ ಮುನವಳ್ಳಿ, ಹಾನಗಲ್ ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯ ಸರ್ಕಾರಿ ಶಾಲೆಗಳ ಆವರಣದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜರುಗಲಿದೆ.

ಆಯಾ ಇಲಾಖಾ ಅಧಿಕಾರಿಗಳು ಖುದ್ದಾಗಿ ಭಾಗವಹಿಸಿ ಸಾರ್ವಜನಿಕರ ಅಹವಾಲುಗಳು ಹಾಗೂ ಬೇಡಿಕೆಗಳ ಕುರಿತಂತೆ ಸ್ಥಳದಲ್ಲೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.