ADVERTISEMENT

ಭಯ ಬಿಟ್ಟಾಕಿ, ಧೈರ್ಯದಿಂದ ಪರೀಕ್ಷೆ ಎದುರಿಸಿ: ಡಿಡಿಪಿಐ

ಎ‌ಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆತಂಕ, ಸಮಸ್ಯೆ ಪರಿಹರಿಸಿದ ಡಿಡಿಪಿಐ ಅಂದಾನಪ್ಪ ವಡಗೇರಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 9:30 IST
Last Updated 8 ಜೂನ್ 2020, 9:30 IST
ಅಂದಾನಪ್ಪ ವಡಗೇರಿ, ಡಿಡಿಪಿಐ
ಅಂದಾನಪ್ಪ ವಡಗೇರಿ, ಡಿಡಿಪಿಐ   

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಕೊರೊನಾ ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿದ್ದ ಭಯ, ಗೊಂದಲ, ಆತಂಕ ಮತ್ತು ಸಮಸ್ಯೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಮೂಲಕ ಆತ್ಮಸ್ಥೈರ್ಯ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿದರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ.

ನಗರದ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕರೆ ಮಾಡಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತವಾಗಿ ಸ್ಪಂದಿಸಿ, ಸ್ಪಷ್ಟ ಉತ್ತರ ನೀಡುವ ಮೂಲಕ ಮಕ್ಕಳ ಮನಸ್ಸನ್ನು ಗೆದ್ದರು.

ಕರೆ ಮಾಡಿದ25ಕ್ಕೂ ಹೆಚ್ಚು ಮಕ್ಕಳ ಪ್ರಶ್ನೆಗಳಲ್ಲಿ, ಪರೀಕ್ಷಾ ಭಯಕ್ಕಿಂತ ಕೊರೊನಾ ಭಯವೇ ಜಾಸ್ತಿ ಕಾಡಿದ್ದು ಕಂಡುಬಂದಿತು. ಕೊರೊನಾ ಸೋಂಕು ಇರುವಾಗ ಸುರಕ್ಷಿತವಾಗಿ ಹೇಗೆ ಪರೀಕ್ಷೆ ಎದುರಿಸುವುದು? ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ, ಪರೀಕ್ಷೆ ನಡೆಸುವ ಅಗತ್ಯವಿತ್ತೇ? ಪರೀಕ್ಷಾ ಕೇಂದ್ರದಲ್ಲಿ ಯಾವ ಯಾವ ಸೌಲಭ್ಯಗಳಿವೆ? ಮಾಸ್ಕ್‌, ಸ್ಯಾನಿಟೈಸರ್‌ ಸಿಗುತ್ತದೆಯೇ? ಅಂತರ ಕಾಪಾಡಿಕೊಳ್ಳುವುದು ಹೇಗೆ? ಆರೋಗ್ಯ ತಪಾಸಣೆ ಮಾಡುತ್ತೀರಾ? ಹೀಗೆ ಹಲವಾರು ಪ್ರಶ್ನೆಗಳು ‘ಕೊರೊನಾ’ ಸುತ್ತಲೇ ಗಿರಕಿ ಹೊಡೆದವು.

ADVERTISEMENT

ಇನ್ನು ಕೆಲವು ವಿದ್ಯಾರ್ಥಿಗಳು, ಪರೀಕ್ಷೆ ಮುಂದೂಡುತ್ತೀರಾ?, ಪರೀಕ್ಷೆಯಲ್ಲಿ ಹೊಸ ನಿಯಮಗಳಿವೆಯೇ? ಪ್ರಶ್ನೆಪತ್ರಿಕೆ ಈ ಬಾರಿ ಕಠಿಣವಾಗಿರುತ್ತವೆಯೇ? ಈ ಬಾರಿ ‘ಕನ್ನಡ ಭಾಷೆ’ ಪತ್ರಿಕೆ ಬದಲು ‘ಇಂಗ್ಲಿಷ್‌ ಭಾಷೆ’ಯನ್ನೇಕೆ ಮೊದಲ ಪತ್ರಿಕೆಯನ್ನಾಗಿ ಮಾಡಿದ್ದೀರಿ? ಪರೀಕ್ಷಾ ಕೇಂದ್ರ ಬದಲಿಸುತ್ತೀರಾ? ಹೆಚ್ಚು ಅಂಕ ಗಳಿಸುವುದು ಹೇಗೆ? ಮುಂತಾದ ಪ್ರಶ್ನೆಗಳನ್ನು ಕೇಳಿದರು. ಎಲ್ಲ ಪ್ರಶ್ನೆಗಳಿಗೂ ಉಪಯುಕ್ತ ಮಾಹಿತಿ ನೀಡುವ ಮೂಲಕ ಅವರ ಗೊಂದಲ, ಸಮಸ್ಯೆ ನಿವಾರಿಸಿದರು.

14 ತುರ್ತು ಪರೀಕ್ಷಾ ಕೇಂದ್ರಗಳು:

ಜಿಲ್ಲೆಯಲ್ಲಿ 21,789 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, 75 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಿಂದ 407 ಮಕ್ಕಳು ಬೇರೆ ತಾಲ್ಲೂಕು ಮತ್ತು ಜಿಲ್ಲೆಗೆ ವಲಸೆ ಹೋಗಿದ್ದಾರೆ. 695 ಮಕ್ಕಳು ಬೇರೆ ಕಡೆಯಿಂದ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಪ್ರತಿ ತಾಲ್ಲೂಕಿಗೆ ತಲಾ 2ರಂತೆ, ಜಿಲ್ಲೆಯಲ್ಲಿ ಒಟ್ಟು 14 ತುರ್ತು ಪರೀಕ್ಷಾ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಡೇ ಕ್ಷಣದಲ್ಲಿ ಕೊರೊನಾ ಸೋಂಕು ಕಂಡು ಬಂದು ಪರೀಕ್ಷಾ ಕೇಂದ್ರವಿರುವ ಪ್ರದೇಶ ‘ಸೀಲ್‌ಡೌನ್’‌ ಆದರೆ, ಪರೀಕ್ಷೆ ನಡೆಸಲು ತೊಡಕಾಗದಿರಲಿ ಎಂದು ಹೆಚ್ಚುವರಿ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಇದುವರೆಗೂ ಕಂಟೈನ್ಮೆಂಟ್‌ ಆದ ಪ್ರದೇಶದಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳು ಇಲ್ಲ ಎಂದು ಡಿಡಿಪಿಐ ಸ್ಪಷ್ಟಪಡಿಸಿದರು.

ಬಸ್‌ ಸೌಲಭ್ಯ:

ಈಗಾಗಲೇ ಗುರುತಿಸಿರುವಂತೆ 963 ಮಕ್ಕಳಿಗೆ 19 ಮಾರ್ಗಗಳಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಉಳಿದಂತೆ 19,368 ಮಕ್ಕಳು ಸ್ವಂತ ವಾಹನ ಮತ್ತು ಸೈಕಲ್‌ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬರಲಿದ್ದಾರೆ. 1327 ಮಕ್ಕಳು ರೂಟ್‌ ಬಸ್‌ನಲ್ಲಿ ಬರುತ್ತಾರೆ. ಯಾವುದೇ ವಿದ್ಯಾರ್ಥಿಗೆ ರೆಗ್ಯುಲರ್‌ ಬಸ್‌ ಸಿಗಲಿಲ್ಲ ಎಂದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಮಕ್ಕಳನ್ನು ಕರೆತರುವ ಜವಾಬ್ದಾರಿ ಆಯಾ ಶಾಲೆಯ ಮುಖ್ಯಶಿಕ್ಷಕರಿಗೆ ವಹಿಸುತ್ತೇವೆ ಎಂದು ವಿವರ ನೀಡಿದರು.

ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್‌, ಸ್ಯಾನಿಟೈಸರ್‌:

ಮೊದಲು ಪ್ರತಿ ಕೊಠಡಿಯಲ್ಲಿ 24 ಮಕ್ಕಳಿಗೆ ಆಸನ ವ್ಯವಸ್ಥೆ ಮಾಡುತ್ತಿದ್ದೆವು. ಈ ಬಾರಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲಿ ಎಂಬ ಉದ್ದೇಶದಿಂದ 18ರಿಂದ 20 ಮಕ್ಕಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಿದ್ದೇವೆ. ಒಂದು ಡೆಸ್ಕ್‌ಗೆ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸುತ್ತೇವೆ. ಪ್ರತಿ ವಿದ್ಯಾರ್ಥಿಯ ನಡುವೆ 3 ಅಡಿ ಅಂತರ ಕಾಯ್ದುಕೊಳ್ಳಲಾಗುವುದು. ಸೋಂಕಿತ ಲಕ್ಷಣಗಳು ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು.

ಮೊದಲ ದಿನ ಪ್ರತಿ ವಿದ್ಯಾರ್ಥಿಗೂ ತಲಾ 2 ಮಾಸ್ಕ್‌ಗಳನ್ನು ಉಚಿತವಾಗಿ ಕೊಡಲಾಗುವುದು. ಜತೆಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಆರೋಗ್ಯ ತಪಾಸಣೆ ಮಾಡಿ, ಸ್ಯಾನಿಟೈಸರ್ ಹಾಕುತ್ತೇವೆ. ಸೋಂಕಿನ ಭಯ ಇರುವುದರಿಂದ, ಕುಡಿಯುವ ನೀರನ್ನು ವಿದ್ಯಾರ್ಥಿಗಳು ಮನೆಯಿಂದಲೇ ತರುವುದು ಒಳ್ಳೆಯದು. ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇದ್ದು, ಪಾರದರ್ಶಕವಾಗಿ ಪರೀಕ್ಷೆ ನಡೆಸುತ್ತೇವೆ. ಸ್ಕೌಟ್ಸ್‌ ಮತ್ತು ಗೈಡ್ಸ್‌, ಪೊಲೀಸ್‌ ಇಲಾಖೆ ಸಿಬ್ಬಂದಿಯ ನೆರವನ್ನು ಪಡೆಯಲಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.