ADVERTISEMENT

ಹಾವೇರಿಯಲ್ಲೂ ‘ದೆಹಲಿ ಮಾದರಿ ಚಳವಳಿ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 12:55 IST
Last Updated 23 ಸೆಪ್ಟೆಂಬರ್ 2021, 12:55 IST
ಮಾಲತೇಶ ಪೂಜಾರ 
ಮಾಲತೇಶ ಪೂಜಾರ    

ಹಾವೇರಿ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ–ಸವಣೂರಿನಲ್ಲಿ ಟೆಂಟ್‌ ಹಾಕಿ, ‘ದೆಹಲಿ ಮಾದರಿ’ಯಲ್ಲೇ ಚಳವಳಿ ಆರಂಭಿಸುತ್ತೇವೆ’ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು. ರೈತರ ಮೇಲೆ ಫೈನಾನ್ಸ್‌ ಸಂಸ್ಥೆಗಳು ನಡೆಸುತ್ತಿರುವ ದಬ್ಬಾಳಿಕೆ ತಡೆಗಟ್ಟಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಧರಣಿ ನಡೆಸುತ್ತೇವೆ. ಈ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರಾಜ್ಯ ಸಮಿತಿ ಶೀಘ್ರ ದಿನಾಂಕ ಪ್ರಕಟಿಸಲಿದೆ’ ಎಂದು ಹೇಳಿದರು.

ದೆಹಲಿಯಲ್ಲಿ ನಿರಂತರವಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ರೈತ ಮುಖಂಡರನ್ನು ಕರೆದು ಮಾತನಾಡಿಸುವ ಸೌಜನ್ಯ ತೋರುತ್ತಿಲ್ಲ. ರೈಲ್ವೆ, ವಿದ್ಯುತ್‌, ವಿಮಾನಸಂಸ್ಥೆ, ರಸ್ತೆ, ಬ್ಯಾಂಕ್‌ ಎಲ್ಲವನ್ನೂ ಖಾಸಗೀಕರಣ ಮಾಡಿ ದೇಶವನ್ನೇ ಮಾರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊರಟಿದೆ. ‘ಬಾರುಕೋಲು ಚಾಟಿ ಚಳವಳಿ’ ಮೂಲಕ ಜನಪ್ರತಿನಿಧಿಗಳ ಬೆನ್ನು ಹತ್ತಿ ಬುದ್ಧಿ ಕಲಿಸುತ್ತೇವೆ ಎಂದು ಗುಡುಗಿದರು.

ADVERTISEMENT

ಕೇಂದ್ರ ಸರ್ಕಾರ ಈಗಾಗಲೇ ಬಂಡವಾಳಶಾಹಿಗಳ ಸರ್ಕಾರ ಎಂದು ನಿರೂಪಿಸಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ಸೆ.27ರಂದು ನಡೆಯುವ ‘ಭಾರತ್‌ ಬಂದ್‌’ ಅಂಗವಾಗಿ ಹಾವೇರಿ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದೇವೆ. ಕನ್ನಡಪರ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಎಂ.ಎನ್‌.ನಾಯಕ್‌, ಹನುಮಂತಪ್ಪ ಹುಚ್ಚಣ್ಣನವರ, ಮುತ್ತು ಗುಡಿಗೇರಿ, ಚನ್ನಪ್ಪ ಮರಡೂರು, ಗೋಣೆಪ್ಪ ಕರಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.