ರಾಣೆಬೆನ್ನೂರು: ತಾಲ್ಲೂಕಿನ ವೈಟಿ ಹೊನ್ನತ್ತಿ (ಯಲ್ಲಾಪುರ) ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಆಗ್ರಹಿಸಿ ಆರು ಗ್ರಾಮಗಳ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ನಿರ್ಮಾಣ ಹೋರಾಟ ಸಮಿತಿ ಪದಾಧಿಕಾರಿಗಳು ವೈಟಿ ಹೊನ್ನತ್ತಿ ಕ್ರಾಸ್ ಬಾಗಲಕೋಟೆ– ಬಿಳಿಗಿರಿ ರಂಗ ಬೆಟ್ಟ ರಾಜ್ಯ ಹೆದ್ದಾರಿ ಬಳಿ ಮಂಗಳವಾರ ಹೋರಾಟ ನಡೆಸಿದರು.
ಹೋರಾಟ ಸಮಿತಿ ಮುಖಂಡ ಜಗದೀಶ ಕೆರೂಡಿ ಮಾತನಾಡಿ, ವೈಟಿ ಹೊನ್ನತ್ತಿ ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡ ಇಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಕೆಲಸಕ್ಕೆ ದೂರದ ರಾಮಾಪುರಕ್ಕೆ ಅಲೆದಾಡುವಂತಾಗಿದೆ. ಕಳೆದ 9 ವರ್ಷಗಳಿಂದ ಸ್ವಂತ ಕಟ್ಟಡ ನಿರ್ಮಾಣಕ್ಕೆ ತಾಲ್ಲೂಕು, ಜಿಲ್ಲಾ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದರು.
‘ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಸುಮಲತಾ ಎಸ್.ಪಿ ಭೇಟಿ ನೀಡಿ, ‘ಈಗಾಗಲೇ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಲಾಗಿದೆ. ಈ ಬಗ್ಗೆ ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆ ಮಾಡಲಾದ ₹10 ಲಕ್ಷ ಅನುದಾನವನ್ನು ಗ್ರಾಮ ಪಂಚಾಯಿತಿಗೆ ಜಮಾ ಮಾಡಲಾಗಿದೆ’ ಎಂದು ತಿಳಿಸಿದರು.
‘ವೈಟಿ ಹೊನ್ನತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರದ ಸಮಾಜ ಕಲ್ಯಾಣ ಇಲಾಖೆಯ ಆಶ್ರಮದ ಕಚೇರಿಯಲ್ಲಿ ತಾತ್ಕಾಲಿಕವಾಗಿ ಕಾರ್ಯಾಲಯ ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ 6 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಗೋವಿಂದ ಲಮಾಣಿ, ರಾಜು ಓಲೇಕಾರ, ವೆಂಕಟೇಶ ದೊಡ್ಡಮನಿ, ರವಿ ಮಳಲಿ, ಲೋಕಣ್ಣ ಲಮಾಣಿ, ಮಲ್ಲೇಶ ಪೂಜಾರ, ಮಹಾಂತೇಶ ವಡ್ಡರ, ಪರಸಪ್ಪ ವಡ್ಡರ, ಬಸವರಾಜಪ್ಪ ಬ್ಯಾಡಗಿ, ಮಲ್ಲಪ್ಪ ಜ್ಯೋತಿ, ಮೌನೇಶ್ ಹಳ್ಳಿ, ಹನುಮಂತ ಗುತ್ತಲ, ಪ್ರಕಾಶ ಪೂಜಾರ ಇದ್ದರು.
ಗ್ರಾಮೀಣ ಠಾಣೆ ಪಿಎಸ್‌ಐ ಮಹಾಂತೇಶ ಮರದಬುಡಿಕಿನ, ಸಂಜೀವಕುಮಾರ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.