ADVERTISEMENT

ಭೂಸ್ವಾಧಿನಕ್ಕೆ ಆಗ್ರಹ: ಪ್ರತಿಭಟನೆ

ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ: ಮಾಲ್ಕಿ ಜಾಗ ವಶಪಡಿಸಿಕೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 2:46 IST
Last Updated 7 ಅಕ್ಟೋಬರ್ 2020, 2:46 IST
ಬ್ಯಾಡಗಿ ಪಟ್ಟಣದ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯನ್ನು ಬೇಗನೆ ವಿಸ್ತರಿಸುವಂತೆ ಆಗ್ರಹಿಸಿ ಕರವೇ ಸದಸ್ಯರು ತಹಶೀಲ್ದಾರ್ ರವಿ ಕೊರವರ ಮೂಲಕ ಮನವಿ ಸಲ್ಲಿಸಿದರು
ಬ್ಯಾಡಗಿ ಪಟ್ಟಣದ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯನ್ನು ಬೇಗನೆ ವಿಸ್ತರಿಸುವಂತೆ ಆಗ್ರಹಿಸಿ ಕರವೇ ಸದಸ್ಯರು ತಹಶೀಲ್ದಾರ್ ರವಿ ಕೊರವರ ಮೂಲಕ ಮನವಿ ಸಲ್ಲಿಸಿದರು   

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯ ಮಾಲ್ಕಿ ಜಾಗವನ್ನು ಕೂಡಲೇ ಭೂಸ್ವಾದೀನ ಪಡಿಸಿಕೊಂಡು, ರಸ್ತೆ ವಿಸ್ತರಣೆ ಕಾರ್ಯ ಚುರುಕುಗೊಳಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಳಿಕ ಪ್ರಭಾರಿ ತಹಶೀಲ್ದಾರ್ ರವಿ ಕೊರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಖ್ಯ ರಸ್ತೆ ವಿಸ್ತರಣೆ ಕಾರ್ಯ ವಿಳಂಬವಾಗುತ್ತಿದೆ. ವಾಹನ ದಟ್ಟಣೆ ಹೆಚ್ಚಿದ್ದರೂ ಮುಖ್ಯ ರಸ್ತೆ ಕಿರಿದಾಗಿದ್ದರಿಂದ ಸಂಚಾರಕ್ಕೆ ತುಂಬ ತೊಂದರೆ ಅನುಭವಿಸುವಂತಾಗಿದೆ. ಕಳೆದ 11 ವರ್ಷಗಳಿಂದ ಪ್ರತಿಭಟನೆಯ ಮೂಲಕ ಹೋರಾಟ ನಡೆಸುತ್ತಿದ್ದರೂ ರಸ್ತೆ ವಿಸ್ತರಣಾ ಕಾರ್ಯ ಮಾತ್ರ ಆರಂಭಗೊಂಡಿಲ್ಲ ಎಂದು ಆರೋಪಿಸಿದರು.

ADVERTISEMENT

ಹನುಮಂತ ಭೋವಿ ಮಾತನಾಡಿ, ಪಟ್ಟಣದ ಮುಖ್ಯ ರಸ್ತೆಯ ವಿಸ್ತರಣೆಗೆ ಜಿಲ್ಲಾಧಿಕಾರಿಗಳು ಮುಂದಾಗಬೇಕು, ಹೆಚ್ಚಿನ ಮುತುವರ್ಜಿ ವಹಿಸಿ ಇಲ್ಲಿಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ನೂರಹ್ಮದ್ ಲಕ್ಷ್ಮೇಶ್ವರ ಮಾತನಾಡಿ, ಮುಖ್ಯ ರಸ್ತೆಯ ಮಾಲ್ಕಿ ಜಾಗ ಭೂಸ್ವಾಧೀನ ಮಾಡಿಕೊಳ್ಳಲು ಹಾಗೂ ನಷ್ಟ ಹೊಂದಿದವರಿಗೆ ಪರಿಹಾರ ನೀಡಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಭೂಸ್ವಾಧೀನಕ್ಕೆ ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಬಹಿರಂಗಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಮಾದೇವಪ್ಪ ಹೆಡಿಗ್ಗೊಂಡ, ಗೌರಮ್ಮ ಈಟಿ, ಮೌಲಾಸಾಬ ನದಾಫ್, ವಿಶ್ವನಾಥ ದೀಪದ, ಫಕ್ಕೀರೇಶ ಹಿರೇಮಠ, ಸುನಿಲ ಪೂಜಾರ, ಚೇತನ ಮಣ್ಣಬಸಣ್ಣನವರ, ಕುಮಾರ ಮಾಸಣಗಿ, ಮಂಜು ಸಾವಕ್ಕನವರ, ಚಂದ್ರು ಸಣ್ಣಮನಿ, ಹನುಮಂತ ನೆಗಳೂರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.