ADVERTISEMENT

ದೇವರಗುಡ್ಡ: ಜೂನ್‌ 30ರವರೆಗೆ ದರ್ಶನವಿಲ್ಲ

ಲಿಖಿತ ಆದೇಶ ಕಾಯುತ್ತಿರುವ ‘ಕಾಗಿನೆಲೆ ಪ್ರಾಧಿಕಾರ’, ಕೃಷ್ಣಮೃಗ ವನ್ಯಧಾಮಕ್ಕಿಲ್ಲ ಪ್ರವೇಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 16:41 IST
Last Updated 7 ಜೂನ್ 2020, 16:41 IST
ಕಾಗಿನೆಲೆ ಕ್ಷೇತ್ರ
ಕಾಗಿನೆಲೆ ಕ್ಷೇತ್ರ    

ಹಾವೇರಿ: ದೇವಸ್ಥಾನ, ಮಸೀದಿ, ಚರ್ಚ್‌ ಬಾಗಿಲುಗಳನ್ನು ಜೂನ್‌ 8ರಿಂದ ತೆರೆಯಲು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಆದರೆ, ಜಿಲ್ಲೆಯ ಪ್ರಮುಖ ಧಾರ್ಮಿಕ ಮತ್ತು ಮನರಂಜನಾ ತಾಣಗಳಾದ ಕಾಗಿನೆಲೆ, ಬಾಡಾ, ದೇವರಗುಡ್ಡ, ರಾಕ್‌ ಗಾರ್ಡನ್‌ ಸೇರಿದಂತೆ ಪ್ರಮುಖ ತಾಣಗಳು ಸೋಮವಾರ ಬಾಗಿಲು ತೆರೆಯುತ್ತಿಲ್ಲ.

ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ದೇವರಗುಡ್ಡದ ಮಾಲತೇಶ ಸ್ವಾಮಿ ದೇವಸ್ಥಾನದ ಬಾಗಿಲನ್ನು ಜೂನ್‌ 30ರವರೆಗೆ ತಾತ್ಕಾಲಿಕವಾಗಿ ದೇವರ ದರ್ಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ತಿಳಿಸಿದ್ದಾರೆ.

ಗ್ರಾಮದ ಮತ್ತು ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ದೇಗುಲದ ಆಡಳಿತ ಮಂಡಳಿ ಕೈಗೊಂಡಿದೆ. ಭಕ್ತರ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಕನಕನ ದರ್ಶನವಿಲ್ಲ:

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯ ‘ಕನಕ ಪರಿಸರ ಸ್ನೇಹಿ ಉದ್ಯಾನ’ ಮತ್ತು ಶಿಗ್ಗಾವಿ ತಾಲ್ಲೂಕಿನ ಬಾಡಾ ಗ್ರಾಮದ ‘ಕನಕ ಅರಮನೆ’ಯ ಬಾಗಿಲನ್ನು ಸೋಮವಾರ ತೆರೆಯುತ್ತಿಲ್ಲ. ಕೊರೊನಾ ಸೋಂಕು ತಡೆಗಟ್ಟಲು ಬೇಕಾದ ಅಗತ್ಯ ಸಿದ್ಧತೆ ಕೈಗೊಂಡು, ಆದೇಶ ಸಿಕ್ಕ ಕೂಡಲೇ ತೆರೆಯಲು ಕ್ರಮ ಕೈಗೊಳ್ಳುತ್ತೇವೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸುತ್ತೇವೆ ಎಂದು ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರವಾಸಿಗರ ನೆಚ್ಚಿನ ತಾಣ ಗೊಟಗೋಡಿಯ ‘ಉತ್ಸವ ರಾಕ್‌ ಗಾರ್ಡನ್‌‘ ತೆರೆಯಲು ಅಗತ್ಯ ಸಿದ್ಧತೆ ಕೈಗೊಂಡಿದ್ದೇವೆ. ಆದರೆ, ನಮಗೆ ಜಿಲ್ಲಾಧಿಕಾರಿಯವರಿಂದ ಅಧಿಕೃತ ಆದೇಶ ಸಿಕ್ಕಿಲ್ಲ. ಸಿಕ್ಕ ಕೂಡಲೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದು ಪ್ರಕಾಶ ದಾಸನೂರ ತಿಳಿಸಿದರು.

ಕೃಷ್ಣಮೃಗ ವನ್ಯಧಾಮಕ್ಕಿಲ್ಲ ಪ್ರವೇಶ:

‘ಹಾವೇರಿ ವಲಯದ ಕರ್ಜಗಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ, ಹಾನಗಲ್‌ ವಲಯದ ‘ಕುಮಾರೇಶ್ವರ ಸಸ್ಯೋದ್ಯಾನ’ ಹಾಗೂ ಹಿರೇಕೆರೂರು ವಲಯದ ‘ಮದಗದ ಕೆಂಚಮ್ಮ ಸಸ್ಯೋದ್ಯಾನ’ಗಳಿಗೆ ಸೋಮವಾರ ನಿಸರ್ಗ ಪ್ರೇಮಿಗಳ ಪ್ರವೇಶಕ್ಕೆ ಅವಕಾಶವಿಲ್ಲ. ರಾಣೆಬೆನ್ನೂರಿನ ಕೃಷ್ಣಮೃಗ ವನ್ಯಧಾಮ ಮತ್ತು ಬಂಕಾಪುರದ ನವಿಲುಧಾಮ ಕೂಡ ಸೋಮವಾರ ಬಾಗಿಲು ತೆರೆಯುತ್ತಿಲ್ಲ.ಅಗತ್ಯ ಸಿದ್ಧತೆ ಮಾಡಿಕೊಂಡು ಒಂದು ವಾರದ ನಂತರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಇ. ಕ್ರಾಂತಿ ತಿಳಿಸಿದರು.

ಹಾವೇರಿ ನಗರದ ಹುಕ್ಕೇರಿಮಠದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಗರದ ಪ್ರಮುಖ ಮಸೀದಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸೋಮವಾರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಧಾರ್ಮಿಕ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.