ಹಾನಗಲ್: ಶತಮಾನ ಕಂಡಿರುವ ತಾಲ್ಲೂಕಿನ ಮಾರನಬೀಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮತ್ತು ಭಾನುವಾರ ಶತಮಾನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.
ಶಿಕ್ಷಣ ಪ್ರೇಮಿಗಳ ಪ್ರೋತ್ಸಾಹ, ದಾನಿಗಳ ಸಹಾಯ, ಹಳೆಯ ವಿದ್ಯಾರ್ಥಿಗಳ ಸಾಥ್ ಮತ್ತು ಶಾಲಾಭಿವೃದ್ಧಿ ಸಮಿತಿಯ ಕಾಳಜಿಯಿಂದ ಮಾರನಬೀಡ ಶಾಲೆ ಅಭಿವೃದ್ಧಿ ಕಂಡಿದೆ.
ಆರಂಭದ ದಿನಗಳಲ್ಲಿ ಗ್ರಾಮದ ದೇವಸ್ಥಾನಗಳಲ್ಲಿ ಪಾಠ ಮಾಡಲಾಗುತ್ತಿತ್ತು. ಸ್ಥಳೀಯ ಮುದುಕಪ್ಪ ಬಸಪ್ಪ ಕರಿಯಪ್ಪನವರ ಅವರು 1955 ರಲ್ಲಿ ಶಾಲೆ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ದಾನ ಮಾಡಿದರು. ಸದ್ಯ ಶಾಲೆಯಲ್ಲಿ 270 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1ರಿಂದ 7ನೇ ತರಗತಿವರೆಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 9 ಶಿಕ್ಷಕರಿದ್ದು 10 ಕೊಠಡಿಗಳಿವೆ.
ನರೇಗಾ ಅನುದಾನ ಬಳಸಿಕೊಂಡು ಶಾಲೆಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಆಟದ ಮೈದಾನ, ರನಿಂಗ್ ಟ್ರ್ಯಾಕ್, ಕಬಡ್ಡಿ, ಕೊಕ್ಕೊ, ವಾಲಿಬಾಲ್ ಕೋರ್ಟ್ ನಿರ್ಮಾಣಗೊಂಡಿವೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಶಾಲೆಯ ಪ್ರವೇಶದ್ವಾರದಿಂದ ಕೊಠಡಿಗಳ ತನಕ ಪುಟ್‌ಫಾತ್ ಟ್ರ್ಯಾಕ್ ನಿರ್ಮಿಸಲಾಗಿದೆ.
ಹಳೆಯ ವಿದ್ಯಾರ್ಥಿ ಚಂದ್ರು ಶಿವಬಸಕ್ಕನವರ ₹60 ಸಾವಿರ ವೆಚ್ಚದಲ್ಲಿ ದ್ವಾರ ಬಾಗಿಲಿಗೆ ಸರಸ್ವತಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಇದರ ಅಕ್ಕಪಕ್ಕದಲ್ಲಿ ವಿದ್ಯಾರ್ಥಿಗಳ ಮೂರ್ತಿಯನ್ನು ಗ್ರಾಮದ ಶಿಲ್ಪ ಕಲಾವಿದ ಬಸವರಾಜ ಈಳಿಗೇರ ನಿರ್ಮಿಸಿಕೊಟ್ಟಿದ್ದಾರೆ. ಎಸ್‌ಡಿಎಂಸಿ ಸದಸ್ಯರ ದೇಣಿಗೆ ಹಣದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಇದಕ್ಕೆ ಸ್ಥಳೀಯ ದಾನಿ ಬಸವಂತಪ್ಪ ವಡೆಯರ ನೆರವು ನೀಡಿದ್ದಾರೆ.
ಶತಮಾನೋತ್ಸವ ಸಮಾರಂಭದ ಖರ್ಚು ವೆಚ್ಚವನ್ನು ಗ್ರಾಮ ಪಂಚಾಯಿತಿ ವತಿಯಿಂದ ನಿಭಾಯಿಸಲಾಗುತ್ತದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಸಂಶಿ ತಿಳಿಸಿದ್ದಾರೆ. ಶಾಸಕರ ಸ್ಥಳೀಯ ಅನುದಾನದಲ್ಲಿ 5 ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ ಮತ್ತು ಸ್ಮಾರ್ಟ್ ಕ್ಲಾಸ್ ಒದಗಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಮಾರನಬೀಡದ ಚನ್ನಬಸವ ಅಗ್ರೋ ವತಿಯಿಂದ ಶಾಲಾ ಕೊಠಡಿಗಳಿಗೆ ಗ್ರೀನ್ ಬೋರ್ಡ್ ಮತ್ತು ಅಗತ್ಯದ ಪೀಠೋಪಕರಣ ಒದಗಿಸಲಾಗಿದೆ. ಶಾಲೆಗೆ ಅಗತ್ಯ ಸಾಮಗ್ರಿಗಳನ್ನು ಶಿಕ್ಷಣ ಪ್ರೇಮಿಗಳು ಒದಗಿಸಿಕೊಟ್ಟಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಮಡಿವಾಳರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.