ADVERTISEMENT

ಧರ್ಮಾ ಜಲಾಶಯಕ್ಕೆ ‘ಸಿಂಧೂರ ಸಿದ್ಧಪ್ಪ’ ನಾಮಕರಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:21 IST
Last Updated 11 ಆಗಸ್ಟ್ 2025, 2:21 IST
ಹಾನಗಲ್‌ ತಾಲ್ಲೂಕಿನ ನೀರಾವರಿ ಸೆಲೆಯಾದ ಧರ್ಮಾ ಜಲಾಶಯ ಭರ್ತಿಯಾಗಿದ್ದು, ಭಾನುವಾರ ಸಿಂಧೂರ ಮನೆತನದವರು ಮತ್ತು ರೈತ ಸಂಘಟನೆಯಿಂದ ಬಾಗಿನ ಸಲ್ಲಿಸಲಾಯಿತು.
ಹಾನಗಲ್‌ ತಾಲ್ಲೂಕಿನ ನೀರಾವರಿ ಸೆಲೆಯಾದ ಧರ್ಮಾ ಜಲಾಶಯ ಭರ್ತಿಯಾಗಿದ್ದು, ಭಾನುವಾರ ಸಿಂಧೂರ ಮನೆತನದವರು ಮತ್ತು ರೈತ ಸಂಘಟನೆಯಿಂದ ಬಾಗಿನ ಸಲ್ಲಿಸಲಾಯಿತು.   

ಹಾನಗಲ್: ತಾಲ್ಲೂಕಿನ ಕೃಷಿ ಜೀವನಾಡಿ ಧರ್ಮಾ ಜಲಾಶಯ ತುಂಬಿ ಹರಿಯುತ್ತಿದ್ದು, ಜಲಾಶಯ ನಿರ್ಮಾತೃ, ಮಾಜಿ ಶಾಸಕ ಸಿಂಧೂರ ಸಿದ್ಧಪ್ಪನವರ ಮನೆತನದವರು ಮತ್ತು ರೈತ ಸಂಘದ ಪ್ರಮುಖರು ಜಲಾಶಯಕ್ಕೆ ಬಾಗಿನ ಸಲ್ಲಿಸಿದರು.

‘ಹಾನಗಲ್ ತಾಲ್ಲೂಕಿಗೆ ನೀರಾವರಿ ಆಸರೆಯಾಗಬೇಕು ಎಂಬ ಕನಸಿನೊಂದಿಗೆ ಮುಂಡಗೋಡ ತಾಲ್ಲೂಕಿನ ಮಳಗಿ ಸಮೀಪದಲ್ಲಿ ಧರ್ಮಾ ನದಿಗೆ ಜಲಾಶಯವನ್ನು ನಮ್ಮ ತಾತ ಸಿಂಧೂರ ಸಿದ್ಧಪ್ಪನವರು ಶಾಸಕರಾಗಿದ್ದ ಅವಧಿಯಲ್ಲಿ ನಿರ್ಮಾಣ ಮಾಡಿದರು. ಜಲಾಶಯ ನಿರ್ಮಾಣದ ಯೋಜನೆಗೆ ಅನುದಾನ ಕೊರತೆಯಾದಾಗ ಸ್ವಂತ ಹಣ ಖರ್ಚು ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದರು. ಹೀಗಾಗಿ ಅವರ ಹೆಸರು ಅಜರಾಮರಗೊಳ್ಳಬೇಕು. ಜಲಾಶಯಕ್ಕೆ ಸಿಂಧೂರ ಸಿದ್ಧಪ್ಪ ಎಂದು ನಾಮಕರಣ ಮಾಡಬೇಕು’ ಎಂದು ಸಿಂಧೂರ ಮನೆತನದ ಜಗದೀಶ ಸಿಂಧೂರ ಆಗ್ರಹಿಸಿದರು.

ಇದೇ ಮನೆತನದ ನಾಗಪ್ಪ ಸವದತ್ತಿ ಮಾತನಾಡಿ, ‘ಜಲಾಶಯದ ಆವರಣದಲ್ಲಿ ಸೌಂದರ್ಯ ಹೆಚ್ಚಿಸಲು ಉದ್ಯಾನ ನಿರ್ಮಿಸಿ, ಸಿಂಧೂರ ಸಿದ್ಧಪ್ಪನವರ ಪುತ್ಥಳಿ ಸ್ಥಾಪನೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ‘ಧರ್ಮಾ ಜಲಾಶಯ ನಿರ್ಮಾಣದ ಉದ್ದೇಶ ಅರಿಯಬೇಕು. ಜಲಾಶಯ ಕೃಷಿ ಕ್ಷೇತ್ರದ ನೀರಾವರಿಗೆ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗಬೇಕು. ಬರಗಾಲದಲ್ಲಿ ಮಾತ್ರ ಕುಡಿಯುವ ನೀರಿಗಾಗಿ ಹೆಚ್ಚು ಬಳಕೆಯಾಗಲಿ’ ಎಂದರು.

ಸಿಂಧೂರ ಸಿದ್ಧಪ್ಪನವರ ಮನೆತನದ ರುದ್ರಪ್ಪ ಸಿಂಧೂರ, ಚನ್ನಬಸಪ್ಪ ಸಿಂಧೂರ, ಶಿವಣ್ಣ ಸಿಂಧೂರ, ವಿಶ್ವನಾಥ ಸಿಂಧೂರ, ಪಂಪಣ್ಣ ಸಿಂಧೂರ ಮತ್ತು ರೈತ ಸಂಘಟನೆಯ ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಸುಜಾತಾ ನಂದಿಶೆಟ್ಟರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.