ಬ್ಯಾಡಗಿ: ಪಟ್ಟಣದ ನಿವೇಶನ ರಹಿತ ಬಡವರಿಗೆ ಆ.15 ರೊಳಗೆ ವಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಇಲ್ಲಿಯ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು, ಬಡವರಿಗೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಮಲ್ಲೂರು ರಸ್ತೆ ಬದಿ 10 ಎಕರೆ ಜಮೀನು ಖರೀದಿಸಲಾಗಿತ್ತು, ಆದರೆ ಕಾರಣಾಂತರಗಳಿಂದ ಹಂಚಿಕೆಯಲ್ಲಿ ವಿಳಂಬವಾಗಿದೆ. ಹಳೆಯ ಪಟ್ಟಿಯಲ್ಲಿರುವವರನ್ನು ಹೊರತುಪಡಿಸಿ ಹೊಸಬರು ಹಾಗೂ ಅನರ್ಹರಿಗೆ ಅವಕಾಶ ನೀಡದೆ ನಿವೇಶನ ಹಂಚಿಕೆ ಮಾಡಲಾಗುವುದೆಂದು ಭರವಸೆ ನೀಡಿದರು.
ಮುಖ್ಯರಸ್ತೆ ವಿಸ್ತರಣೆಯಲ್ಲಿ ಜಾಗೆಯನ್ನು ಕಳೆದುಕೊಳ್ಳುವ ಮಾಲೀಕರಿಗೂ ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವೇಶನ ಒದಗಿಸಲಾಗುವುದು, ಅಲ್ಲದೆ ಪುರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನೀಡಲು ಠರಾವು ಮಾಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾತನಾಡಿ, ಗುಮ್ಮನಹಳ್ಳಿ ಮತ್ತು ತೇರೆದಹಳ್ಳಿ ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಮಾಸಣಗಿ ಮತ್ತು ಮಲ್ಲೂರು ಗ್ರಾಮ ಪಂಚಾಯ್ತಿಗೆ ಪತ್ರ ಬರೆಯಲಾಗಿದೆ. ಸೇರ್ಪಡೆಯಾದರೆ ಸುಮಾರು 20ಕ್ಕೂ ಹೆಚ್ಚು ಕೋಲ್ಡ್ ಸ್ಟೊರೇಜ್, ಖಾರದ ಪುಡಿ ಘಟಕಗಳು ಪಟ್ಟಣದ ವ್ಯಾಪ್ತಿಗೆ ಸೇರಲಿವೆ. ಇವುಗಳಿಂದ ಪುರಸಭೆಗೆ ₹3ಕೋಟಿಗೂ ಹೆಚ್ಚು ಆದಾಯ ಬರಲಿದೆ. ಕೂಡಲೇ ಸರ್ಕಾರದಿಂದ ಆದೇಶ ಹೊರಡಿಸಲು ಶಾಸಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಪುರಸಭೆ ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಚಿಕನ್, ಮಾಂಸದಂಗಡಿಗಳು ತಲೆ ಎತ್ತಿವೆ. ಅವುಗಳನ್ನು ತೆರವುಗೊಳಿಸಿ ಸೂಕ್ತ ಜಾಗೆಯಲ್ಲಿ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಮುಖ್ಯಾಧಿಕಾರಿ ವಿನಯಕುಮಾರ ಮಾತನಾಡಿ, ಕೇಂದ್ರ ಸರ್ಕಾರದ ನೆರವಿನ ಅಮೃತ ಯೋಜನೆ ಜಾರಿಯಾಗಿದ್ದು, ₹10 ಲಕ್ಷ ಮಂಜೂರಾಗಿದೆ. ಸ್ವಹಾಯ ಸಹಾಯ ಸಂಘಗಳ ಮೂಲಕ 4 ಎಕರೆ ಜಾಗೆಯಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ರಸ್ತೆ ಬದಿ 3 ಸಾವಿರ ನೆರಳು ನೀಡುವ ಮತ್ತು ಹಣ್ಣಿನ ಸಸಿಗಳನ್ನು ಬೆಳೆಸಲು ನಿರ್ಧರಿಸಲಾಗಿದೆ ಎಂದರು. ಈ ವೇಳೆ ಉಪಾಧ್ಯಕ್ಷ ಸುಭಾಷ ಮಾಳಗಿ ಸ್ಥಾಯಿ ಸಮಿತಿ ಚೇರ್ಮನ್ ಚಂದ್ರಣ್ಣ ಶೆಟ್ಟರ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.