ADVERTISEMENT

ರೈತರಿಂದ ಸೇವಾ ಶುಲ್ಕ ಪಡೆಯಬೇಡಿ

ಮುಂಗಾರು ಬೆಳೆವಿಮೆ ನೋಂದಣಿ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 14:38 IST
Last Updated 16 ಜೂನ್ 2021, 14:38 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳೆವಿಮೆ ಕುರಿತ ಕರಪತ್ರಗಳನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಬಿಡುಗಡೆ ಮಾಡಿದರು. ಜಿ.ಪಂ. ಸಿಇಒ ಮೊಹಮ್ಮದ್‌ ರೋಶನ್‌ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದಾರೆ 
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳೆವಿಮೆ ಕುರಿತ ಕರಪತ್ರಗಳನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಬಿಡುಗಡೆ ಮಾಡಿದರು. ಜಿ.ಪಂ. ಸಿಇಒ ಮೊಹಮ್ಮದ್‌ ರೋಶನ್‌ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದಾರೆ    

ಹಾವೇರಿ: ಬೆಳೆವಿಮೆ ಕುರಿತು ಸಮಗ್ರ ಮಾಹಿತಿ ನೀಡಿ ಹೆಚ್ಚು ರೈತರು ನೋಂದಾಯಿಸಲು ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ವಿಮಾ ನೋಂದಣಿಗೆ ರೈತರಿಂದ ಸೇವಾ ಶುಲ್ಕಗಳನ್ನು ಪಡೆಯದಂತೆ ಬ್ಯಾಂಕ್ ಮತ್ತು ಸೇವಾ ಕೇಂದ್ರಗಳಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಗಾರು ಬೆಳೆವಿಮೆ ನೋಂದಣಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಳೆ ವಿಮೆ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಬೆಳೆವಿಮಾ ಕರಪತ್ರ ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.

ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಬೆಳೆವಿಮೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವಿಮಾ ಕಂಪನಿಗಳೇ ರೈತರ ಪರವಾಗಿ ಸೇವಾ ಶುಲ್ಕವನ್ನು ಸಾಮಾನ್ಯ ಸೇವಾ ಕೇಂದ್ರಗಳಿಗೆ ಭರಿಸುವುದರಿಂದ ಯಾವುದೇ ಕಾರಣಕ್ಕೂ ರೈತರಿಂದ ಸೇವಾ ಶುಲ್ಕ ಪಡೆಯಬಾರದು. ವಿಮಾ ಮೊತ್ತ ಮಾತ್ರ ಪಡೆಯುವಂತೆ ಸೂಚನೆ ನೀಡಿದರು.

ADVERTISEMENT

ಬೆಳೆವಿಮೆ ನೋಂದಣಿ ಕುರಿತಂತೆ ಜಂಟಿ ಕೃಷಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಸಭೆಗೆ ಮಾಹಿತಿ ನೀಡಿ, ‘ಪ್ರಸಕ್ತ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ನಾಲ್ಕು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್‌. ಅವರು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮಾಹಿತಿ ನೀಡಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಹಸಿಮೆಣಸಿನಕಾಯಿ, ಅಡಿಕೆ ಹಾಗೂ ಶುಂಠಿ (ಎನ್.ಎಸ್) ಮೂರು ಬೆಳಗಳನ್ನು ಅಧಿಸೂಚಿಸಲಾಗಿದೆ. ವಿಮೆ ಕಂತು ತುಂಬಲು ಜೂನ್ 30 ಕೊನೆಯ ದಿನವಾಗಿದೆ ಎಂದರು.

ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಿರೇಕೆರೂರು ಹಾಗೂ ಶಿಗ್ಗಾವಿ ತಾಲ್ಲೂಕಿಗೆ ಹಸಿ ಮೆಣಸಿನಕಾಯಿ, ಅಡಿಕೆ ಮತ್ತು ಶುಂಠಿ, ಹಾವೇರಿ, ರಾಣೆಬೆನ್ನೂರು ಹಾಗೂ ಸವಣೂರು ತಾಲ್ಲೂಕಿಗೆ ಹಸಿಮೆಣಸಿನಕಾಯಿ ಅಧಿಸೂಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್, ಕೃಷಿ ಉಪನಿರ್ದೇಶಕಿ ಸ್ಪೂರ್ತಿ, ಕರಿಯಲ್ಲಪ್ಪ ಕೊರಚರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.