ADVERTISEMENT

ಜೆಡಿಎಸ್‌ಗೆ ಮತ ನೀಡಿದರೆ ಬಿಜೆಪಿಗೆ ನೀಡಿದಂತೆ: ಶಾಸಕ ಜಮೀರ ಅಹ್ಮದ್ ಖಾನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:48 IST
Last Updated 27 ಅಕ್ಟೋಬರ್ 2021, 4:48 IST
ತಿಳವಳ್ಳಿಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಜಮೀರ ಅಹ್ಮದ್ ಖಾನ್ ಪ್ರಚಾರ ನಡೆಸಿದರು
ತಿಳವಳ್ಳಿಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಜಮೀರ ಅಹ್ಮದ್ ಖಾನ್ ಪ್ರಚಾರ ನಡೆಸಿದರು   

ತಿಳವಳ್ಳಿ: ಹಾನಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಮುಸ್ಲಿಂ ಭಾಂಧವರು ಯಾವುದೇ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಬೇಡಿ. ಜೆಡಿಎಸ್ ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದ ಹಾಗೇ ಎಂದು ಶಾಸಕ ಜಮೀರ ಅಹ್ಮದ್ ಖಾನ್ ಹೇಳಿದರು.

ತಿಳವಳ್ಳಿ ಗ್ರಾಮದ ಗೇಟ್ ಸರ್ಕಲ್ ನಿಂದ ಹರ್ಢೀಕರ ವೃತ್ತದ ವರೆಗೂ ರೋಡ್ ಷೋ ನಡೆಸಿ ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಹಾವೇರಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಯಾಗುತ್ತೇನೆ. ಬಿಜೆಪಿಯವರು ಕೇವಲ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಅವರು ರೈತ, ಕಾರ್ಮಿಕ, ಕೋವಿಡ್ ಸೋಂಕಿತರು, ಸತ್ತವರ ಕುಟುಂಬಕ್ಕೆ ಸಹಾಯ ಮಾಡಲಿಲ್ಲ. ಆದರೂ ಅದ್ಯಾವ ಮುಖ ಇಟ್ಟುಕೊಂಡು ಬಂದು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ. ಶ್ರೀನಿವಾಸ ಮಾನೆ ಅವರು ಆಪತ್ಭಾಂಧವ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಉದ್ಯೋಗ ಕಳೆದುಕೊಂಡವರ ಮನೆಗೆ ಹೋಗಿ ತಲಾ ₹ 2 ಸಾವಿರ ರೂಪಾಯಿ ಚೆಕ್ ಕೊಟ್ಟಿದ್ದಾರೆ. ಆದ್ದರಿಂದ ಅವರನ್ನು 25 ಸಾವಿರ ಮತಗಳಿಂದ ಗೆಲ್ಲಿಸಿ ಎಂದರು.

ಬಿ.ಎ. ಬಾವಾ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಹಾನಗಲ್ ಜನರ ಸಹಾಯಕ್ಕೆ ಉದಾಸಿ ಆಗಲಿ ಅವರ ಮಗ ಸಂಸದ ಶಿವಕುಮಾರ ಉದಾಸಿ ಬರಲಿಲ್ಲ. ನಮ್ಮ ಅಭ್ಯರ್ಥಿ ಮಾನೆಯವರು ಕೊರೊನಾ ಕಷ್ಟಕಾಲದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅದು ಅವರ ಕೆಲಸ ಆಗಿರಲಿಲ್ಲ ಆದರೂ ಜನರಿಗೆ ಸಹಾಯ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸುಮಾರು 6000 ಮತಗಳಿಂದ ಸೋತರು. ಸೋತರು ಮನೆಯಲ್ಲಿ ಕೂರದೆ ಅವರ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಈ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದರು.

ADVERTISEMENT

ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರೀಫ್ ಲೋಹಾರ, ಸಮದ್ ಮೂಡಿ, ಶಿವಯೋಗಿ ವಡೆಯರ, ಫಯಾಜ್ ಲೋಹಾರ, ವಾಸೀಮ್ ಪಠಾಣ, ಬಸವರಾಜ ಜೋಗಿ, ದುದ್ದುಭಾಷಾ ತಿಳವಳ್ಳಿ, ರಾಜು ಶೇಷಗಿರಿ ಇದ್ದರು.

ಜನ ಕಷ್ಟದಲ್ಲಿದ್ದಾಗ ಮಲಗಿದ್ದ ಬಿಜೆಪಿ: ಪ್ರಮೋದ್ ಮಧ್ವರಾಜ್

ಹಾನಗಲ್: ಎಲ್ಲ ವರ್ಗದ ಜನರನ್ನು ಜೊತೆಗೆ ಕರೆದೊಯ್ಯಬಲ್ಲ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಬಡವರು, ಅಸಹಾಯಕರು, ನಿರ್ಗತಿಕರು ಹೀಗೆ ಅಶಕ್ತ ವರ್ಗದ ಬಂಧುಗಳಿಗೆ ಕಾಂಗ್ರೆಸ್ ಶಕ್ತಿ ತುಂಬುತ್ತಾ ಬಂದಿದೆ. ಆದರೆ ಏನೂ
ಮಾಡದ ಬಿಜೆಪಿ ಇಂದಿಗೂ ಕೇವಲ ಭರವಸೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿದೆ ಎಂದು ಕಾಂಗ್ರೆಸ್
ಮುಖಂಡ ಪ್ರಮೋದ್ ಮಧ್ವರಾಜ್ ಹರಿಹಾಯ್ದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಮನೋಹರ ನಗರ, ಬಾಳಂಬೀಡ, ಲಕ್ಮಾಪುರ, ಹಿರೇಹುಲ್ಲಾಳ, ಆಡೂರು, ಕಂಚಿನೆಗಳೂರು, ಮಲಗುಂದ, ಶಾಡಗುಪ್ಪಿ, ಡೊಳ್ಳೇಶ್ವರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಮತಯಾಚಿಸಿ ಮಾತನಾಡಿದರು.

ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನಹಿತ ಬಲಿಕೊಟ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರದ ಹಣ ಹಂಚಿ ಚುನಾವಣೆಯಲ್ಲಿ ಗೆಲ್ಲಲು ಹೊಂಚು ಹಾಕಿದೆ. ಜನ ಇಲ್ಲಿ ದಡ್ಡರಿಲ್ಲ, ಜಾಣರಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ಜನರಿಗೆ ಯಾರು ಸ್ಪಂದಿಸಿದ್ದಾರೆ ಎನ್ನುವುದರ ಅರಿವಿದೆ. ಬಿಜೆಪಿಗೆ ಒಮ್ಮಲೇ ಜನರ ಮೇಲೆ ಅನುಕಂಪ ಉಕ್ಕಿ ಬಂದಿದೆ. ಇದೆಲ್ಲಾ ಚುನಾವಣೆ ಗಿಮಿಕ್ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

ಅಧಿಕಾರದಲ್ಲಿ ಇಲ್ಲದಿದ್ದರೂ ಕೂಡ ಶ್ರೀನಿವಾಸ ಮಾನೆ ಜನರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಕೊರೊನಾ ಪರಿಣಾಮ ಜನ ಉದ್ಯೋಗ ಕಳೆದುಕೊಂಡಾಗ ಅವರ ನೆರವಿಗೆ ನಿಂತು ಆಪತ್ಭಾಂಧವ ಎನಿಸಿದ್ದಾರೆ. ಜನ ಸಮಸ್ಯೆ ಹೊತ್ತು ಮಲಗಿದ್ದಾಗ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು, ಮುಖಂಡ ಅನಂತವಿಕಾಸ್ ನಿಂಗೋಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.