ADVERTISEMENT

ಲಾಠಿ ಪ್ರಹಾರ ನಿಲ್ಲಿಸಿ; ದಂಡ ಹಾಕಿ

ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ: ಶಾಸಕ ನೆಹರು ಓಲೇಕಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 12:28 IST
Last Updated 30 ಮಾರ್ಚ್ 2020, 12:28 IST

ಹಾವೇರಿ: ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ದಂಡಹಾಕಿ, ವಶಕ್ಕೆ ಪಡೆಯಬೇಕು. ನಿಷೇಧಾಜ್ಞೆ ಮುಗಿಯುವವರೆಗೂ ವಾಹನಗಳನ್ನು ಹಿಂದಿರುಗಿಸಬೇಡಿ. ಆದರೆ ಲಾಠಿ ಪ್ರಹಾರ ಮಾಡಬೇಡಿ ಎಂದು ಪೊಲೀಸರಿಗೆ ಶಾಸಕ ನೆಹರು ಓಲೇಕಾರ ಸೂಚನೆ ನೀಡಿದರು.

ಕೊರೊನಾ ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನ ಕುರಿತಂತೆ ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಜನರು ಅನಗತ್ಯವಾಗಿ ಓಡಾಡುವುದು, ಗುಂಪು ಸೇರುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಆದ್ದರಿಂದ ಜನದಟ್ಟಣೆಯಾಗದಂತೆ ಕಠಿಣ ಕ್ರಮಕೈಗೊಳ್ಳಿ. ಗೃಹಬಂಧನದಲ್ಲಿರುವವರು ಮನೆಯಿಂದ ಹೊರಗೆ ಬರದಂತೆ ನಿಗಾವಹಿಸಿ ಎಂದು ಸಲಹೆ ನೀಡಿದರು.

ADVERTISEMENT

ಅಧಿಕಾರಿಗಳಿಗೆ ತರಾಟೆ: ನಗರ ಸ್ವಚ್ಛತೆ ಹಾಗೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವಂತೆ ಪೌರಾಯುಕ್ತರಿಗೆ ಹಾಗೂ ನಗರಸಭೆ ಪರಿಸರ ಎಂಜಿನಿಯರ್‌ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಿದರು. ಎರಡು ದಿನಗಳಿಂದ ಕುಡಿಯುವ ನೀರಿನ ಸರಬರಾಜಿನ ಪೈಪ್ ಹಾಳಾದರೂ ದುರಸ್ತಿ ಮಾಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಐಸೋಲೇಷನ್ ವಾರ್ಡ್‍ಗಳಿಗೆ ಅಗತ್ಯವಾದ ಹೆಚ್ಚುವರಿ ಕಟ್ಟಡಗಳನ್ನು ಸಿದ್ಧತೆ ಮಾಡಿಕೊಳ್ಳಿ, ಮೊರಾರ್ಜಿ ಶಾಲೆಗಳು, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಳೆ ಕಚೇರಿ, ಹಾವೇರಿಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಬೋಗಿಗಳ ಬಳಕೆ ಸೇರಿದಂತೆ ಎಲ್ಲ ಕ್ರಮಗಳನ್ನು ವಹಿಸಿ, ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಸುರಕ್ಷಾ ಉಪಕರಣಗಳ ದಾಸ್ತಾನಿಗೆ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ಪ್ರೋತ್ಸಾಹಧನ: ಕಾರ್ಮಿಕ ಅಧಿಕಾರಿಗಳು, ಹಾವೇರಿ ತಾಲ್ಲೂಕಿನ 7 ಸಾವಿರ ನೋಂದಾಯಿತ ಕಾರ್ಮಿಕರಿಗೆ ತಲಾ ಒಂದು ಸಾವಿರ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ 1,500 ಕಾರ್ಮಿಕರ ಖಾತೆಗೆ ನೇರ ಹಣ ಜಮಾ ಮಾಡಲಾಗಿದೆ. ರೆಡ್ ಕ್ರಾಸ್ ಸಹಯೋಗದಲ್ಲಿ ಕಾರ್ಮಿಕರಿಗೆ ಕೊರೊನಾ ಸುರಕ್ಷತಾ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕೃಷಿ ಕೆಲಸಕ್ಕೆ ನಿರ್ಬಂಧ ಬೇಡ, ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಮತಿಯಲ್ಲಿ ಯಾವುದೇ ತೊಂದರೆಯಾಗಬಾರದು. ಅಗತ್ಯ ವಸ್ತುಗಳ ಸಾಗಾಣಿಕೆಗೆ ಪರವಾನಗಿ ನೀಡುವ ವ್ಯವಸ್ಥೆ ಸರಳೀಕರಿಸಿ. ರೇಷ್ಮೆಗೂಡು ಸಾಗಾಣಿಕೆ, ಹಣ್ಣು, ತರಕಾರಿ, ಸಾಗಾಣಿಕೆಗೆ ತೊಂದರೆಯಾಗಬಾರದು ಎಂದು ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.

ಸಭೆಯಲ್ಲಿ ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ತಹಶೀಲ್ದಾರ್‌ ಶಂಕರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಪೌರಾಯುಕ್ತ ಬಸವರಾಜ ಜಿದ್ದಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.