ADVERTISEMENT

ಮೀನಿನಾಸೆಗೆ ಬಲೆಗೆ ಸಿಲುಕಿದ ಗರುಡ!

ಹೆಗ್ಗೇರಿ ಕೆರೆ ದಡದಲ್ಲಿ ಬಿದ್ದಿದ್ದ ಪಕ್ಷಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 4:57 IST
Last Updated 19 ಜನವರಿ 2022, 4:57 IST
ಗರುಡ ಪಕ್ಷಿಯ ಕಾಲಿಗೆ ಮೀನಿನ ಬಲೆ ಸಿಲುಕಿರುವ ದೃಶ್ಯ   ಚಿತ್ರ: ಮಾಲತೇಶ ಅಂಗೂರ
ಗರುಡ ಪಕ್ಷಿಯ ಕಾಲಿಗೆ ಮೀನಿನ ಬಲೆ ಸಿಲುಕಿರುವ ದೃಶ್ಯ   ಚಿತ್ರ: ಮಾಲತೇಶ ಅಂಗೂರ   

ಹಾವೇರಿ: ನಗರದ ಹೊರವಲಯದ ಹೆಗ್ಗೇರಿ ಕೆರೆಯಲ್ಲಿ ಮೀನುಗಳನ್ನು ಬೇಟೆಯಾಡಲು ಯತ್ನಿಸಿದ ‘ಮೀನು ಗರುಡ’ವೊಂದು (ರಿಂಗ್ ಟೈಲ್ಡ್ ಫಿಷಿಂಗ್ ಈಗಲ್) ಮೀನಿನ ಬಲೆಯೊಳಗೆ ಸಿಲುಕಿ ಒದ್ದಾಡಿದ ಘಟನೆ ಮಂಗಳವಾರ ನಡೆದಿದೆ.

ಮೀನುಗಳು ನೀರಿನ ಮೇಲ್ಭಾಗದಲ್ಲಿ ಕಾಣಿಸಿಕೊಂಡಾಗ ‌ಗರುಡ ವೇಗವಾಗಿ ಹಾರಿ ಬಂದು, ಕಾಲಿನ ಉಗುರುಗಳಿಂದ ಹಿಡಿಯುವುದು ಸಾಮಾನ್ಯ ಪ್ರಕ್ರಿಯೆ.ಮೀನುಗಾರರು ಹಾಕಿದ್ದ ಬಲೆಯಲ್ಲಿ ಸಿಲುಕಿದ್ದ ಮೀನನ್ನು ತನ್ನ ಬಲವಾದ ಕಾಲುಗಳಿಂದ ಹಿಡಿದು ಬಲೆಯನ್ನೇ ತುಂಡರಿಸಿ ಮೇಲಕ್ಕೆ ಹಾರಿತು.

ಮೀನನ್ನು ಭಕ್ಷಿಸಲು ಮುಂದಾದ ಸಂದರ್ಭ ಗರುಡ ಪಕ್ಷಿಯ ಕೊಕ್ಕು ಬಲೆಯಲ್ಲಿ ಸಿಲುಕಿಕೊಂಡು ವಿಲವಿಲ ಒದ್ದಾಡುತ್ತಲೇ ಆಗಸದಲ್ಲಿ ಕೆಲ ನಿಮಿಷ ಗಿರಕಿ ಹೊಡೆಯಿತು. ಹಾರಾಟ ನಡೆಸಲು ಶಕ್ತಿ ಕುಂದಿದಂತೆ ನಿಧಾನವಾಗಿ ಕೆರೆಯ ದಂಡೆಯಲ್ಲಿ ಬೆಳೆದಿದ್ದ ಗಿಡಗಂಟಿಗಳ ಮೇಲೆ ದೊಪ್ಪನೆ ಬಿದ್ದಿತು.

ADVERTISEMENT

‘ಗರುಡ ಪಕ್ಷಿ ಮೀನಿನ ಬಲೆಯ ಪ್ಲಾಸ್ಟಿಕ್‌ ವೈರುಗಳಿಂದ ಬಂಧಿಯಾಗಿತ್ತು. ವೈರ್‌ಗಳನ್ನು ಕತ್ತರಿಸಿದ ನಂತರ ಬಂಧನಮುಕ್ತವಾದ ಗರುಡ ಮಿಸುಕಾಡಿತು. ನಂತರ ರೆಕ್ಕೆಯನ್ನು ಪಟಪಟನೆ ಬಡಿಯುತ್ತಾ, ಆಗಸದತ್ತ ಹಾರಿ ಹೋಯಿತು. ಪಕ್ಷಿಯನ್ನು ರಕ್ಷಿಸಿದ ಸಂತೃಪ್ತಿ ದೊರೆಯಿತು’ ಎಂದು ಹವ್ಯಾಸಿ ಛಾಯಾಗ್ರಾಹಕ ಮಾಲತೇಶ ಅಂಗೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.