ADVERTISEMENT

ಮಾಜಿ ಸೈನಿಕರನ್ನು ಮಾತನಾಡಿಸಿದ್ದೀರಾ?

ಹುತಾತ್ಮರ ವಿಧವೆಯರು, ಯುದ್ಧದಲ್ಲಿ ಹೋರಾಡಿದ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ‘ಭವನ’

ಹರ್ಷವರ್ಧನ ಪಿ.ಆರ್.
Published 1 ಮಾರ್ಚ್ 2019, 19:45 IST
Last Updated 1 ಮಾರ್ಚ್ 2019, 19:45 IST
ಹಾವೇರಿಯ ವಿಶ್ವೇಶತೀರ್ಥ ನಗರದಲ್ಲಿರುವ ನಿವೇಶನ ಹಾಗೂ ಅರ್ಧಕ್ಕೆ ನಿಂತಿರುವ ಮಾಜಿ ಸೈನಿಕರ ಭವನವನ್ನು ತೋರಿಸುತ್ತಿರುವ ಮಾಜಿ ಸೈನಿಕ ಶಂಕ್ರಪ್ಪ ವಿ. ಕರಮಡಿ
ಹಾವೇರಿಯ ವಿಶ್ವೇಶತೀರ್ಥ ನಗರದಲ್ಲಿರುವ ನಿವೇಶನ ಹಾಗೂ ಅರ್ಧಕ್ಕೆ ನಿಂತಿರುವ ಮಾಜಿ ಸೈನಿಕರ ಭವನವನ್ನು ತೋರಿಸುತ್ತಿರುವ ಮಾಜಿ ಸೈನಿಕ ಶಂಕ್ರಪ್ಪ ವಿ. ಕರಮಡಿ   

ಹಾವೇರಿ: ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಇತ್ಯಾದಿ ಖಾತೆಗಳಲ್ಲಿ, ಕಚೇರಿ, ರಸ್ತೆ, ವೃತ್ತ, ಮೈದಾನಗಳಲ್ಲಿ ಈಗ ಸೈನಿಕರ ಪರ ಭಾಷಣ, ಜಯಕಾರ, ಗುಣಗಾನ. ಯುದ್ಧೋತ್ಸಾಹ...

ಆದರೆ, ದೇಶಕ್ಕಾಗಿ ಹೋರಾಡಿದ್ದ ಮಾಜಿ ಸೈನಿಕರು, ಹುತಾತ್ಮ ಸೈನಿಕರ ಕುಟುಂಬಗಳು, ಹಾಲಿ ಸೈನಿಕರ ಪತ್ನಿ, ತಾಯಿ, ಮಕ್ಕಳನ್ನು ನೀವು ಮಾತನಾಡಿಸಿದ್ದೀರಾ? ಅವರ ಹೋರಾಟಕ್ಕೆ ಸ್ಪಂದಿಸಿದ್ದೀರಾ? ಇಲ್ಲಿದೆ ನೋಡಿ...

–ದೇಶ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡಿ ಬಂದ 1,200ಕ್ಕೂ ಹೆಚ್ಚು ಮಾಜಿ ಸೈನಿಕರು, 141 ಹುತಾತ್ಮರ ಪತ್ನಿಯರು (ವಿಧವೆಯರು) ಹಾಗೂ ಸಾವಿರಕ್ಕೂ ಹೆಚ್ಚು ಸೈನಿಕರು ಜಿಲ್ಲೆಯಲ್ಲಿ ಇದ್ದಾರೆ. ಇವರ ಹಾಗೂ ಕುಟುಂಬಗಳ ಕಲ್ಯಾಣಕ್ಕಾಗಿ ನಗರದ ವಿಶ್ವೇಶತೀರ್ಥ ನಗರದಲ್ಲಿ ‘ಮಾಜಿ ಸೈನಿಕ ಭವನ’ ನಿರ್ಮಿಸಲು 2001ರಿಂದ ‘ಹೋರಾಟ’ವೇ ನಡೆಯುತ್ತಿದೆ.

ADVERTISEMENT

1997ರಲ್ಲಿ ಜಿಲ್ಲೆ ರಚನೆಯಾದ ಬಳಿಕ ‘ಹಾವೇರಿ ಜಿಲ್ಲಾ ಮಾಜಿ ಸೈನಿಕರ ಸಂಘ’ ಸ್ಥಾಪಿಸಿ, 2002ರಲ್ಲಿ ನೋಂದಣಿ ಮಾಡಿಸಿದ್ದಾರೆ. ಭವನದ ನಿವೇಶನಕ್ಕಾಗಿ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸತತ ಮನವಿ ಮಾಡಿದ ಬಳಿಕ, 2005ರಲ್ಲಿ ಮಂಜೂರಾಗಿದೆ. ಅದೂ 3 ಗುಂಟೆ ಮಾತ್ರ.

‘ಅದನ್ನು ಮಾಜಿ ಸೈನಿಕರೇ ₹96 ಸಾವಿರ ವಂತಿಗೆ ಹಾಕಿ ಖರೀದಿಸಿದೆವು. ಆದರೆ, ಅದನ್ನು ಪರಭಾರೆ ಮಾಡಲು ಕೆಲವು ಜನಪ್ರತಿನಿಧಿಗಳು ಹಾಗೂ ಕೆಲ ಸಂಘ–ಸಂಸ್ಥೆಗಳು ಪ್ರಯತ್ನಿಸಿದವು’ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ್ ವಿ. ಶಿಶ್ನಳ್ಳಿ ಬೇಸರ ವ್ಯಕ್ತಪಡಿಸಿದರು.

‘ನಮ್ಮ ನಿವೇಶನವನ್ನು ಹರಾಜಿಗೆ ಇಡಲಾಗಿದೆ ಎಂದು ಭಿತ್ತಿಪತ್ರವನ್ನೂ ಹಾಕಿದ್ದರು. ನಾವು ಹಣ ಕಟ್ಟಿದ ವಿವರವನ್ನು ನೀಡಿ, ತಡೆ ಮಾಡಿದೆವು. ಹೋರಾಟದ ಮೂಲಕ ಉಳಿಸಿಕೊಂಡೆವು’ ಎಂದು ನೋವಿನಿಂದ ಮೆಲುಕು ಹಾಕಿದರು.

‘ಪಾಕ್ ಜೊತೆ ಹಲವು ಯುದ್ಧಗಳನ್ನು 3ರಿಂದ4 ತಿಂಗಳಲ್ಲೇ ಗೆದ್ದಿದ್ದ ನಾವು, 3 ಗುಂಟೆ ಜಾಗೆ ಉಳಿಸಿಕೊಳ್ಳಲು ದಶಕದ ಹೋರಾಟವೇ ನಡೆಸಬೇಕಾಯಿತು. ಉಪವಿಭಾಗಧಿಕಾರಿ, ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಕೊನೆಗೂ 2013ರ ನವೆಂಬರ್ 30ರಂದು ನೋಂದಣಿಯಾಯಿತು’ ಎಂದರು.

ಭವನ:ಈ ನಿವೇಶನದಲ್ಲಿ ₹ 1ಕೋಟಿ ಅಂದಾಜಿನಲ್ಲಿ ಜಿ+3 ಭವನ ನಿರ್ಮಿಸಲು ನಿರ್ಧರಿಸಿದೆವು. ಅದಕ್ಕಾಗಿ ಜನಪ್ರತಿನಿಧಿಗಳ ಮನೆಗಳಿಗೆ ಓಡಾಡಿದೆವು. ರುದ್ರಪ್ಪ ಲಮಾಣಿ ₹ 5 ಲಕ್ಷ, ಸೋಮಣ್ಣ ಬೇವಿನ ಮರದ ₹2 ಲಕ್ಷ ಹಾಗೂ ಬಸವರಾಜ ಹೊರಟ್ಟಿ ₹3 ಲಕ್ಷವನ್ನು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಿದರು. ಸಂಸದ ಶಿವಕುಮಾರ್ ಉದಾಸಿ ಪ್ರದೇಶಾಭಿವೃದ್ಧಿ ನಿಧಿಯಿಂದ ₹5 ಲಕ್ಷಕ್ಕೆ ಒಪ್ಪಿಗೆ ನೀಡಿದ್ದು, ಮಂಜೂರಾಗಬೇಕಾಗಿದೆ ಎಂದು ಖಜಾಂಚಿ ಶಂಕ್ರಪ್ಪ ವಿ. ಕರಮಡಿ ವಿವರಿಸಿದರು.

ಸಿಕ್ಕಿದ ಅನುದಾನದಲ್ಲಿ ಸ್ವಲ್ಪ ಕಾಮಗಾರಿ ನಡೆಸಿದ್ದೇವೆ. ಕೆಲವು ಜನಪ್ರತಿನಿಧಿಗಳ ಮನೆಗೆ ಅಲೆದಾಡಿ, ನಮ್ಮಚಪ್ಪಲಿಗಳು ಸವಿದು ಹೋಗಿವೆ. ಬೇರೆ ರಾಜಕಾರಣಿ, ಉದ್ಯಮಿ, ವರ್ತಕರು, ಸಂಘ–ಸಂಸ್ಥೆಗಳು ಒಂದು ರೂಪಾಯಿಯೂ ವೈಯಕ್ತಿಕ ನೀಡಿಲ್ಲ. ಬೆರಳೆಣಿಕೆ ಮಂದಿ ಬಂದು ಭರವಸೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದರು.

ನಾವು 10ರಿಂದ 30 ವರ್ಷಗಳ ಕಾಲ ಗಡಿಯಲ್ಲಿ ಜೀವ ಲೆಕ್ಕಿಸದೇ ಸೇವೆ ಸಲ್ಲಿಸಿದ್ದೇವೆ. ಆದರೆ, ಮಾಜಿ ಸೈನಿಕರ ಕಲ್ಯಾಣದ ನಿವೇಶನ, ಭವನಕ್ಕೂ ಹೋರಾಟ ಮಾಡಬೇಕು ಎಂದು ಕನಸಲ್ಲೂ ಗ್ರಹಿಸಿರಲಿಲ್ಲ. ಭವನಕ್ಕಾಗಿ ಈ ತನಕ ಯಾರೂ ವೈಯಕ್ತಿಕವಾಗಿ (ಸ್ವಂತ) ಒಂದು ರೂಪಾಯಿಯೂ ನೀಡಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.