ಹಾವೇರಿ:‘ಜೂನ್ ತಿಂಗಳಲ್ಲಿ ಎಲ್ಲಾ ಮಾದರಿಯ ನಂದಿನಿ 500 ಎಂ.ಎಲ್‌ಮತ್ತು 1 ಲೀಟರ್ ಪ್ಯಾಕ್‌ಗಳಲ್ಲಿ ತಲಾ 20 ಎಂ.ಎಲ್. ಹಾಗೂ 40 ಮಿಲಿ ಲೀಟರ್ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸುವ ಯೋಜನೆಯನ್ನು ಜಾರಿಗೊಳಿಲಾಗಿದೆ’ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲಿ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಮತ್ತು ವೈದ್ಯರ ಸಲಹೆಯಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ‘ಹೆಚ್ಚು ಹಾಲು ಕುಡಿಯಿರಿ’ ಅಭಿಯಾನದೊಂದಿಗೆ ಜೂನ್ 1ರಂದು ‘ವಿಶ್ವ ಹಾಲು ದಿನಾಚರಣೆ’ ಕಾರ್ಯಕ್ರಮದೊಂದಿಗೆ ಈ ಯೋಜನೆ ಕೈಗೊಳ್ಳಲಾಗಿದೆ.
ಧಾರವಾಡ ಹಾಲು ಒಕ್ಕೂಟವು ಧಾರವಾಡ, ಹಾವೇರಿ, ಗದಗ, ಮತ್ತು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ವಿಸ್ತರಿಸಿದ್ದು, ಅಲ್ಲಿಯ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ಅತ್ಯಾಧುನಿಕ ಯಂತ್ರಗಳಿಂದ ಸಂಸ್ಕರಿಸಿ ಕರ್ನಾಟಕ ರಾಜ್ಯಾದಂತ ಮನೆ ಮಾತಾಗಿರುವ ನಂದಿನಿ ಬ್ರಾಂಡಿನ ಅಡಿಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಪೂರೈಸಲಾಗುತ್ತಿದೆ.
ಪ್ರಸ್ತುತ ಒಕ್ಕೂಟದ ವ್ಯಾಪ್ತಿಯಲ್ಲಿ 998 ಕಾರ್ಯನಿರತ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ ಸರಾಸರಿ 25 ಲಕ್ಷ ಲೀಟರ್ ಹಾಲು ಶೇಖರಣೆಯೊಂದಿಗೆ ಸರಾಸರಿ 1.05 ಲಕ್ಷ ಲೀಟರ್ ಹಾಲು, 10 ಸಾವಿರ ಕೆ.ಜಿ. ಮೊಸರು, ಮಜ್ಜಿಗೆ, ಲಸ್ಸಿ ಮತ್ತು ನಂದಿನಿಯ 85 ಕ್ಕಿಂತ ಹೆಚ್ಚಿನ ಸಂಖ್ಯೆಯ ವಿವಿಧ ನಮೂನೆಯ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.