ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಹಾವೇರಿ: ರೈತರಿಗೆ ‘ಎನ್‌ಪಿಕೆ 17;17;17’ ಹೆಸರಿನಲ್ಲಿ ಕಳಪೆ ಗೊಬ್ಬರ ಮಾರಿದ್ದ ಆರೋಪದಡಿ ರಾಣೆಬೆನ್ನೂರಿನ ಎರಡು ಮಳಿಗೆ ಮಾಲೀಕರು, ಗೊಬ್ಬರ ಪೂರೈಕೆದಾರರು ಹಾಗೂ ತಯಾರಕರ ವಿರುದ್ಧ ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಕಳಪೆ ಗೊಬ್ಬರವೆಂಬುದು ಗಮನಕ್ಕೆ ಬರುತ್ತಿದ್ದಂತೆ ಮಳಿಗೆಯ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು, ಗೊಬ್ಬರವನ್ನು ಜಪ್ತಿ ಮಾಡಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪುರಾವೆಗಳ ಸಮೇತ ಮೊಕದ್ದಮೆ ಹೂಡಿರುವ ಅಧಿಕಾರಿಗಳು, ತಪ್ಪಿತಸ್ಥರ ವಿರುದ್ಧ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
‘ಸಮರ್ಪಕ ಪ್ರಮಾಣದ ಗೊಬ್ಬರದ ಅಂಶವಿಲ್ಲದ ಎನ್‌ಪಿಕೆ 17;17;17 ಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ರಾಣೆಬೆನ್ನೂರಿನ ಮೆಡ್ಲೇರಿ ರಸ್ತೆಯಲ್ಲಿರುವ ಸ್ವಸ್ತಿಕ್ ಆಗ್ರೋ ಸೆಂಟರ್ ಹಾಗೂ ಬನಶಂಕರಿ ಆಗ್ರೋ ಟ್ರೇಡರ್ಸ್ ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ತಲಾ 50 ಕೆ.ಜಿ. ತೂಕದ 153 ಚೀಲಗಳು ಪತ್ತೆಯಾಗಿವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ತಿಳಿಸಿದರು.
‘ಕೊಪ್ಪಳದ ವಿನಾಯಕ ಆಗ್ರೊ ಇಂಡಸ್ಟ್ರೀಸ್‌ನವರು ಎನ್‌ಪಿಕೆ- 17:17:17 ಗೊಬ್ಬರ ತಯಾರಿಸಿದ್ದಾರೆ. ಅದನ್ನು ನಿರ್ದಿಷ್ಟ ಕಂಪನಿಯವರು, ರಾಣೆಬೆನ್ನೂರಿನ ಮಳಿಗೆಗಳಿಗೆ ಪೂರೈಸಿದ್ದರು. ಆದರೆ, ಮಳಿಗೆಯವರು ಈ ಗೊಬ್ಬರ ಖರೀದಿಸಲು ಅನುಮತಿ ಪಡೆದಿರಲಿಲ್ಲ. ಅವರು ಅಕ್ರಮವಾಗಿ ಗೊಬ್ಬರ ಮಾರುತ್ತಿದ್ದರು’ ಎಂದು ಹೇಳಿದರು.
‘ಮಳಿಗೆಗಳಿಗೆ ಪರವಾನಗಿಯಿದೆ. ಆದರೆ, ಯಾವುದೇ ಗೊಬ್ಬರ ಮಾರಬೇಕಾದರೆ ಅದಕ್ಕೆ ಅನುಮತಿ ಪಡೆಯುವುದು ಕಡ್ಡಾಯ. ಸ್ವಸ್ತಿಕ್ ಆಗ್ರೋ ಸೆಂಟರ್ ಹಾಗೂ ಬನಶಂಕರಿ ಆಗ್ರೋ ಟ್ರೇಡರ್ಸ್‌ನವರು ಯಾವುದೇ ಅನುಮತಿ ಪಡೆಯದೇ ಎನ್‌ಪಿಕೆ 17;17;17 ಗೊಬ್ಬರ ಮಾರುತ್ತಿದ್ದುದ್ದು ಕಂಡುಬಂದಿದೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿಯಿಂದ ವಿಚಾರಣೆ: ‘ಎನ್‌ಪಿಕೆ 17;17;17 ಗೊಬ್ಬರದ ಮಾದರಿಯನ್ನು ದಾವಣಗೆರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸಮರ್ಪಕ ಪ್ರಮಾಣದಲ್ಲಿ ಗೊಬ್ಬರದ ಅಂಶವಿಲ್ಲವೆಂಬುದು ಪರೀಕ್ಷೆಯಿಂದ ಗೊತ್ತಾಗಿದೆ. ಇದೇ ಪರೀಕ್ಷಾ ವರದಿ ಆಧರಿಸಿ ಗೊಬ್ಬರದ ಚೀಲಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣ, ಅಗತ್ಯ ವಸ್ತುಗಳ ಕಾಯ್ದೆಯಡಿ ಅಪರಾಧವಾಗುತ್ತದೆ. ಹೀಗಾಗಿ, ಕಾಯ್ದೆಯ ಪ್ರಕಾರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಆರೋಪ ಸಾಬೀತಾದರೆ ದಂಡ ಹಾಗೂ ಸೂಕ್ತ ಕಾನೂನು ಕ್ರಮವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.