ADVERTISEMENT

ಹಾವೇರಿ | ಕಳಪೆ ಬೀಜ: 639 ರೈತರಿಗೆ ವಂಚನೆ

ರಾಣೆಬೆನ್ನೂರಿನ ಕಂಪನಿ ವಿರುದ್ಧ ಎಫ್‌ಐಆರ್ | 11 ಮಳಿಗೆಗಳಿಗೆ ಬೀಗ

ಸಂತೋಷ ಜಿಗಳಿಕೊಪ್ಪ
Published 30 ಜುಲೈ 2025, 2:24 IST
Last Updated 30 ಜುಲೈ 2025, 2:24 IST
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ  
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ     

ಹಾವೇರಿ: ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ ಮಾರಾಟ ಜಾಲ ಸಕ್ರಿಯವಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಕಳಪೆ ಬೀಜಗಳ ಮಾರಾಟದಿಂದ ರಾಜ್ಯದ 639 ರೈತರಿಗೆ ₹ 58.40 ಲಕ್ಷ ವಂಚನೆಯಾಗಿದ್ದು, ರಾಣೆಬೆನ್ನೂರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಇರುವ ನಿಸರ್ಗ ಸೀಡ್ಸ್ ಕಂಪನಿಯವರು ರೈತರಿಗೆ ಮಾರಿದ್ದ ನಿಸರ್ಗ ಗೋಲ್ಡ್–3399, ನಿಸರ್ಗ–4555, ಎಸ್‌–25 ಹಾಗೂ ನಿಸರ್ಗ–99 ಹೆಸರಿನ ಮೆಕ್ಕೆಜೋಳದ ಬೀಜಗಳು ಕಳಪೆ’ ಎಂಬುದನ್ನು ಕೃಷಿ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

‘ಬೀಜ ತಯಾರಿಸಿದ್ದ ಕಂಪನಿಯ ಮಾಲೀಕರು ಹಾಗೂ ಬೀಜ ಮಾರಿದ್ದ ಮಳಿಗೆಗಳ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಸಂದರ್ಭದಲ್ಲೇ ಕಂಪನಿ ಮಾಲೀಕ ಮಂಜುನಾಥ ಅಜ್ಜಣ್ಣನವರ (51) ಅನಾರೋಗ್ಯದಿಂದ ತೀರಿಕೊಂಡಿದ್ದು, ಪ್ರಕರಣದ ಇತರೆ ಆರೋಪಿಗಳ ವಿಚಾರಣೆ ಪೊಲೀಸರು ನಡೆಸಿದ್ದಾರೆ.

ADVERTISEMENT

‘ಹಾವೇರಿ ಜಿಲ್ಲೆಯವರು ಅಲ್ಲದೇ ದಾವಣಗೆರೆ, ವಿಜಯಪುರ, ವಿಜಯನಗರ, ಕೊಪ್ಪಳ, ಬಳ್ಳಾರಿ, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ರೈತರು ರಾಣೆಬೆನ್ನೂರಿನಲ್ಲಿ ಬೀಜ ಖರೀದಿಸುತ್ತಾರೆ.150ಕ್ಕೂ ಹೆಚ್ಚು ಮಳಿಗೆಗಳು ರಾಣೆಬೆನ್ನೂರಿನಲ್ಲಿವೆ. ಈ ಪೈಕಿ 11 ಮಳಿಗೆಗಳಲ್ಲಿ ನಿಸರ್ಗ ಸೀಡ್ಸ್ ಕಂಪನಿಯ ಕಳಪೆ ಬೀಜಗಳನ್ನು ಮಾರಿದ್ದು ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಣೆಬೆನ್ನೂರಿನ ಶಿವಂ ಸೀಡ್ಸ್, ಮರುಳಸಿದ್ದೇಶ್ವರ ಸೀಡ್ಸ್, ನಿಸರ್ಗ ಸೀಡ್ಸ್, ಸುರ್ಯೋದಯ ಸೀಡ್ಸ್, ಪ್ರಕಾಶ ಹೈಬ್ರೀಡ್ ಸೀಡ್ಸ್, ನಂದಿ ಸೀಡ್ಸ್, ಕೆ.ಬಿ. ಸೀಡ್ಸ್, ಮಣಿಕಂಠ ಸೀಡ್ಸ್, ಗುರು ಹೈಬ್ರೀಡ್ ಸೀಡ್ಸ್, ಗುರು ಶಾಂತೇಶ್ವರ ಅಗ್ರೊ ಸೆಂಟರ್, ಮಂಗಳಾ ಸೀಡ್ಸ್ ಮಳಿಗೆ ಮೇಲೆ ದಾಳಿ ನಡೆಸಿ, ಕಳಪೆ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.

9,392 ಪೊಟ್ಟಣ ಕಳಪೆ ಬೀಜ ಮಾರಾಟ: ‘ಕಳಪೆ ಬೀಜಗಳಿಂದ ನಷ್ಟ ಅನುಭವಿಸಿದ್ದ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಹಾವೇರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ 639 ರೈತರು ಈವರೆಗೆ ಅರ್ಜಿ ಸಲ್ಲಿಸಿದ್ದಾರೆ.  ಅವರೆಲ್ಲರೂ 9,392 ಪೊಟ್ಟಣ ಕಳಪೆ ಬೀಜ ಖರೀದಿಸಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ವಿಜಯ ಮಹಾಂತೇಶ ತಿಳಿಸಿದರು.

‘639 ರೈತರ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅವರ ಜಮೀನುಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಂಡವು ಭೇಟಿ ನೀಡಿ, ವರದಿ ಸಲ್ಲಿಸಲಿದೆ.

ಕಳಪೆ ಗೊಬ್ಬರ: ರೈತರಿಗೆ ‘ಎನ್‌ಪಿಕೆ 17;17;17’ ಹೆಸರಿನಲ್ಲಿ ಕಳಪೆ ಗೊಬ್ಬರ ಮಾರಿದ್ದ ಆರೋಪದಡಿ ರಾಣೆಬೆನ್ನೂರಿನ  ಮೆಡ್ಲೇರಿ ರಸ್ತೆಯಲ್ಲಿರುವ ಸ್ವಸ್ತಿಕ್ ಆಗ್ರೋ ಸೆಂಟರ್ ಹಾಗೂ ಬನಶಂಕರಿ ಆಗ್ರೋ ಟ್ರೇಡರ್ಸ್‌ ರಸಗೊಬ್ಬರ ಮಾರಾಟ ಮಳಿಗೆಗಳ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಹಾವೇರಿಯ ಶ್ರೀನಿವಾಸ್ ಅಗ್ರೊ ಸೆಂಟರ್‌ ವಿರುದ್ಧವೂ ವಿಚಾರಣೆ ನಡೆಯುತ್ತಿದೆ.

ಕಳಪೆ ಬೀಜ ಮಾರಿದ್ದ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಳಿಗೆಗಳ ಪರವಾನಗಿ ರದ್ದುಪಡಿಸಲಾಗಿದೆ
ವಿಜಯ ಮಹಾಂತೇಶ ದಾನಮ್ಮನವರ ಹಾವೇರಿ ಜಿಲ್ಲಾಧಿಕಾರಿ

ಜಿಲ್ಲಾವಾರು ವಂಚನೆಗೀಡಾದ ರೈತರು

ಹಾವೇರಿ; 337

ವಿಜಯನಗರ; 62

ಬಳ್ಳಾರಿ; 79

ಚಿತ್ರದುರ್ಗ; 40

ಗದಗ; 77

ದಾಣವಗೆರೆ; 43

ಧಾರವಾಡ; 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.