ADVERTISEMENT

ರೈತರ ಆತ್ಮಹತ್ಯೆ; ಕಾರಣ ಪತ್ತೆಗೆ ಸಮಿತಿ; ಉಸ್ತುವಾರಿ ಸಚಿವ

ರೈತ ಮುಖಂಡರ ಸಭೆ ನಡೆಸಿದ ಉಸ್ತುವಾರಿ ಸಚಿವ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 5:44 IST
Last Updated 17 ಜುಲೈ 2025, 5:44 IST
ಹಾವೇರಿಯ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ರೈತರ ಜೊತೆ ಏರ್ಪಡಿಸಿದ್ದ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು
ಹಾವೇರಿಯ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ರೈತರ ಜೊತೆ ಏರ್ಪಡಿಸಿದ್ದ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು   

ಹಾವೇರಿ: ‘ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಹಾವೇರಿ ಜಿಲ್ಲೆಯಲ್ಲಿ ಅತ್ಯಧಿಕ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಶಾಲ್ ನೇತೃತ್ವದಲ್ಲಿ ಸಮಿತಿ ರಚಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ರೈತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ವಿಷಯ ಪ್ರಸ್ತಾಪಿಸಿದ್ದ ರೈತ ಮುಖಂಡರು, ‘ಜಿಲ್ಲೆಯಲ್ಲಿ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಕೆಲ ರೈತರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಕೆಲ ಕಾರಣಗಳನ್ನು ನೀಡಿ ಪರಿಹಾರ ತಡೆಹಿಡಿಯಲಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಕೊಡಿಸಿ’ ಎಂದು ಕೋರಿದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ, ‘ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಈ ಹಿಂದಿನ ವರ್ಷದಲ್ಲಿ ಯಾವುದೋ ಕಾರಣದಿಂದ ಪರಿಹಾರ ವಿತರಣೆ ಮಾಡಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹಾವೇರಿ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹಳೆಯ ಆತ್ಮಹತ್ಯೆ ಪ್ರಕರಣಗಳಲ್ಲೂ ಪರಿಹಾರ ವಿತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದೇನೆ’ ಎಂದರು.

‘ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರೊಂದಿಗೆ ಸಭೆ ನಡೆಸುವಂತೆ ಕಾರ್ಯದರ್ಶಿ ವಿಶಾಲ್ ಅವರಿಗೆ ನಿರ್ದೇಶನ ನೀಡಿದ್ದೇನೆ. ರೈತರು ಸಹ ಸಮಿತಿಗೆ ಸಲಹೆಗಳನ್ನು ನೀಡಬಹುದು’ ಎಂದು ಹೇಳಿದರು.

ಕೃಷಿ ಸಾಲ ನೀಡಲು ಸಮಸ್ಯೆ: ‘ನಬಾರ್ಡ್ ನೀಡುತ್ತಿದ್ದ ನೆರವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ರೈತರಿಗೆ ಕೃಷಿ ಸಾಲ ವಿತರಣೆಯಲ್ಲಿ ಸಮಸ್ಯೆಯಾಗಿದೆ. ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈ ವಿಷಯವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ’ ಎಂದು ಪಾಟೀಲ ತಿಳಿಸಿದರು.

‘ಕೃಷಿ ಸಾಲ ವಿತರಣೆಗೆ ಬ್ಯಾಂಕ್‌ನವರು ರೈತರ ಸಿಬಿಲ್ ಸ್ಕೋರ್ ಪರೀಕ್ಷಿಸುತ್ತಿದ್ದಾರೆ’ ಎಂದು ರೈತರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ, ‘ಡಿಸಿಸಿ ಬ್ಯಾಂಕ್‌ಗಳು ಸಿಬಿಲ್ ಸ್ಕೋರ್ ಪರಿಗಣಿಸುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಿಬಿಲ್ ಸ್ಕೋರ್ ಕೇಳುತ್ತಿವೆ. ಈ ಬಗ್ಗೆ ಸಂಸದರ ಜೊತೆ ಚರ್ಚಿಸುವೆ. ರೈತರೂ ಸಂಸದರ ಮೇಲೆ ಒತ್ತಡ ಹಾಕಬೇಕು’ ಎಂದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್, ಪೊಲೀಸ್ ಎಸ್‌ಪಿ ಯಶೋಧಾ ವಂಟಗೋಡಿ ಇದ್ದರು.


‘ಗುತ್ತಿಗೆ ನೇಮಕ: ಅಕ್ರಮವಾಗಿದ್ದರೆ ಕ್ರಮ’

ಹಾವೇರಿ: ‘ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಹಿಮ್ಸ್) ಗುತ್ತಿಗೆ ಹುದ್ದೆಗಳ ಭರ್ತಿಯಲ್ಲಿ ಅಕ್ರಮವಾಗಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹುದ್ದೆಯ ನೇಮಕಾತಿಯಲ್ಲಿ ಅನುಭವ ವಿಚಾರವಾಗಿ ತಾಂತ್ರಿಕ ಸಮಸ್ಯೆಯಾಗಿರುವುದಾಗಿ ಹಿಮ್ಸ್ ಡೀನ್ ತಿಳಿಸಿದ್ದಾರೆ. ಅಕ್ರಮದ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸುವೆ’ ಎಂದರು. ‘ಅಂಗನವಾಡಿಗೆ ಪೂರೈಸುವ ಹಾಲಿನ ಪುಡಿ ಪೊಟ್ಟಣದ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ‘ನಾನೂ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿ ಈ ಸಮಸ್ಯೆ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ದಿಢೀರ್ ಭೇಟಿ ನೀಡಿ ಪುನಃ ಪರಿಶೀಲಿಸುವೆ. ತಪ್ಪು ಕಂಡರೆ ಕ್ರಮ ಕೈಗೊಳ್ಳುತ್ತೇನೆ’ ಎಂದರು. ನಕಲಿ ಗೊಬ್ಬರ ಮಾರಾಟ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನಕಲಿ ಬೀಜ ಹಾಗೂ ಗೊಬ್ಬರಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರಾಟಗಾರರ ಬಂಧನಕ್ಕೂ ಕ್ರಮ ಕೈಗೊಳ್ಳುತ್ತೇವೆ. ಅವರ ಪರವಾನಗಿ ರದ್ದು ಮಾಡಿದ್ದೇವೆ’ ಎಂದರು.

ವರದಾ–ಬೇಡ್ತಿ ಜೋಡಣೆಗೆ ಡಿಪಿಆರ್

‘ವರದಾ ಹಾಗೂ ಬೇಡ್ತಿ ನದಿ ಜೋಡಣೆಗೆ ಸಂಬಂಧಪಟ್ಟಂತೆ ವಿಸ್ತ್ರತ ಯೋಜನಾ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಶಿವಾನಂದ ಪಾಟೀಲ ತಿಳಿಸಿದರು. ‘ನದಿ ಜೋಡಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ. ಡಿಪಿಆರ್ ರಚನೆಗೆ ಸರ್ಕಾರ ಸೂಚನೆ ನೀಡಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.