ADVERTISEMENT

ಸಮಗ್ರ ಕೃಷಿ: ಮಣ್ಣು ಪರೀಕ್ಷೆಗೆ ಸಲಹೆ

ಮಣ್ಣು ಪ‍ರೀಕ್ಷೆ ಮಾಡಿಸಲು, ಎರೆಹುಳು ಗೊಬ್ಬರ ಬಳಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:25 IST
Last Updated 20 ಸೆಪ್ಟೆಂಬರ್ 2020, 2:25 IST
ಸಮಗ್ರ ಕೀಟ ನಿರ್ವಹಣೆ ಕುರಿತು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ. ಅಶೋಕ ಮಾಹಿತಿ ನೀಡಿದರು
ಸಮಗ್ರ ಕೀಟ ನಿರ್ವಹಣೆ ಕುರಿತು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ. ಅಶೋಕ ಮಾಹಿತಿ ನೀಡಿದರು   

ರಾಣೆಬೆನ್ನೂರು: ರೈತರು ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದಲ್ಲಿ ಬೆಳೆಗಳಿಗೆ ಪೋಷಕಾಂಶ ನೀಡಬೇಕು ಎಂದು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಪಿ. ಅಶೋಕ ಹೇಳಿದರು.

ತಾಲ್ಲೂಕಿನ ಹನುಮಾಪುರದಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಜನ ನಿರ್ಮಲ ಯೋಜನೆಯಡಿ ಶುಕ್ರವಾರ ರೈತರಿಗೆ ಸಮಗ್ರ ಕೃಷಿ ಮತ್ತು ಸಮಗ್ರ ಕೀಟ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳೆಗಳಿಗೆ ಸಾವಯವ ಗೊಬ್ಬರ ಕೊಡಲು ರೈತರು ತಮ್ಮ ಹೊಲದಲ್ಲಿಯೇ ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್‌ ಗೊಬ್ಬರ ತಯಾರಿಸಬಹುದು. ಇದರಿಂದ ಖರ್ಚು ಕಡಿಮೆಯಾಗುತ್ತದೆ ಹಾಗೂ ಉತ್ತಮ ಗೊಬ್ಬರವೂ ಲಭ್ಯವಾಗುತ್ತದೆ ಎಂದರು. ಗೋವಿನ ಜೋಳದಲ್ಲಿ ಕಳೆ ನಿರ್ವಹಣೆ ಕುರಿತು ಮಾತನಾಡಿ, ಸಮಗ್ರ ಕಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಡಾ. ಕೆ.ಪಿ. ಗುಂಡಣ್ಣನವರ ಮಾತನಾಡಿ, ಕೀಟಗಳಿಂದ ಬೆಳೆ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಹನುಮಾಪರ ಗ್ರಾಮದಲ್ಲಿ ಜಲ ನೆಲ ಯೋಜನೆ ಅಡಿಯಲ್ಲಿ ಜಲಾನಯನ ಅಭಿವೃದ್ಧಿಯಾಗಿದೆ. ಹೆಮಾಟಾ ಹುಲ್ಲಿನ ಬೀಜಗಳನ್ನು ಬದುವಿನಮೇಲೆ ಬೆಳೆದು ಮಣ್ಣು– ನೀರು ಸಂರಕ್ಷಣೆ ಮಾಡಬಹುದು. ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಬಹುದು. ಆಯ್ದ ರೈತರನ್ನು ಗುರುತಿಸಿ ಅವರ ಜಮೀನುಗಳಲ್ಲಿ ಜೀವಾಮೃತ, ಕೈತೋಟ, ಎರಹುಳು ತೊಟ್ಟಿ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದರು.

ಜಿ.ಪಿ. ನದಾಫ್‌, ಎಚ್.ವಿ. ಮಲ್ಲಮ್ಮ, ರೈತರಾದ ಫಕ್ಕೀರಪ್ಪ ಬೂದಗಟ್ಟಿ, ಮತ್ತಯ್ಯ ಅಜ್ಜಿವಡಿಮಠ, ಚಿಕ್ಕಪ್ಪ ಓಲೆಕಾರ, ರುದ್ರಪ್ಪ ತಿರ್ಲಾಪುರ, ಕಮಲವ್ವ ಕನವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.