ಹಾನಗಲ್: ‘ಮುಂಗಾರು ಹಂಗಾಮಿನ ಬಿತ್ತನೆ ಸಮಯದಲ್ಲಿ ಡಿಎಪಿ ರಸಗೊಬ್ಬರ ಕೊರತೆಯಾಗಂದತೆ ಕ್ರಮ ವಹಿಸಬೇಕು’ ಎಂದು ರೈತರು ಮುಖಂಡರು ಆಗ್ರಹಿಸಿದರು.
ಇಲ್ಲಿ ಬುಧವಾರ ನಡೆದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ರುದ್ರಪ್ಪ ಹಣ್ಣಿ, ‘ತಾಲ್ಲೂಕಿನ ಬಿತ್ತನೆ ಕ್ಷೇತ್ರಕ್ಕೆ ತಕ್ಕಂತೆ ಮೊದಲ ಹಂತದಲ್ಲೇ ಡಿಎಪಿ ರಸಗೊಬ್ಬರ ವಿತರಣೆಗೆ ಇಲಾಖೆ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ, ‘ಡಿಎಪಿ ಕೊರತೆ ಇರುವ ಕಾರಣಕ್ಕೆ ಅದಕ್ಕೆ ಪರ್ಯಾಯವಾಗಿ ಬೇರೆ ರಸಗೊಬ್ಬರ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರೈತರು ಸಹಕರಿಸಬೇಕು’ ಎಂದರು.
‘ಡಿಎಪಿ ಕೊರತೆಯಾದರೆ ಕಾಂಪ್ಲೆಕ್ಸ್ ಗೊಬ್ಬರಗಳ ಬಳಕೆಗಾಗಿ ರೈತರಿಗೆ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಹೇಳಿದರು.
ಅಧಿಕಾರಿಗಳು ಮತ್ತು ಮಾರಾಟಗಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡ ಅಡಿವೆಪ್ಪ ಆಲದಕಟ್ಟಿ, ‘ಅಗತ್ಯ ಇರುವಷ್ಟು ರಸಗೊಬ್ಬರ ಪೂರೈಸಲೇ ಬೇಕು’ ಎಂದು ಪಟ್ಟುಹಿಡಿದರು.
ರೈತರನ್ನು ಸಮಾಧಾನಪಡಿಸಿದ ಜಿಲ್ಲಾ ಉಪ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಎಸ್., ‘ಹೆಚ್ಚುವರಿಯಾಗಿ ಡಿಎಪಿ ತರಿಸಿಕೊಳ್ಳಲು ಜಿಲ್ಲಾಡಳಿತದಿಂದ ಪ್ರಯತ್ನಿಸಲಾಗುತ್ತಿದ್ದು, ಕೆಲವೊಮ್ಮೆ ಪರಿಸ್ಥಿತಿ ಕೈಮೀರುತ್ತದೆ’ ಎಂದರು.
‘ಇಲ್ಲಿನ ಮಣ್ಣಿಗೆ ಬಿತ್ತನೆ ಸಮಯದಲ್ಲಿ ಡಿಎಪಿ ಗೊಬ್ಬರವೇ ಸೂಕ್ತ. ಬೇರೆ ಸಮಯದಲ್ಲಿ ಕಾಂಪ್ಲೆಕ್ಸ್, ಮತ್ತಿತರ ಗೊಬ್ಬರ ಬಳಸುತ್ತೇವೆ. ಆದರೆ, ಈಗ ಡಿಎಪಿ ಪೂರೈಕೆಗೆ ಕ್ರಮ ವಹಿಸಬೇಕು’ ಎಂದು ರೈತ ಮುಖಂಡ ರುದ್ರಪ್ಪ ಬಳಿಗಾರ ಒತ್ತಾಯಿಸಿದರು.
359 ಟನ್ ರಸಗೊಬ್ಬರ ದಾಸ್ತಾನು
ಡಿಎಪಿ ದಾಸ್ತಾನು ಇಲ್ಲವೆಂದು ಮಾರಾಟಗಾರರು ಹೇಳುತ್ತಿದ್ದಾರೆ. ಅಂಗಡಿ ಮುಂದೆ ದಾಸ್ತಾನು ವಿವರ ಮತ್ತು ದರಪಟ್ಟಿ ಪ್ರದರ್ಶಿಸುತ್ತಿಲ್ಲ. ರೈತರು ಕೇಳುವ ರಸಗೊಬ್ಬರದ ಜೊತೆಯಲ್ಲಿ ಬೇರೆ ಗೊಬ್ಬರ ಕೀಟನಾಶಕ ಖರೀದಿಸಲು ಒತ್ತಾಯಿಸಲಾಗುತ್ತಿದೆ’ ಎಂಬ ಆರೋಪಗಳು ಸಭೆಯಲ್ಲಿ ಕೇಳಿ ಬಂದವು. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 47000 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಲಾಗುತ್ತದೆ. ಮೇ ಮತ್ತು ಜೂನ್ ತಿಂಗಳ ಬಿತ್ತನೆ ಸಮಯದಲ್ಲಿ 4500 ಟನ್ ಡಿಎಪಿ ರಸಗೊಬ್ಬರ ಅಗತ್ಯವಿರುತ್ತದೆ. ಸದ್ಯ 359 ಟನ್ ರಸಗೊಬ್ಬರ ದಾಸ್ತಾನು ಇದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.