ADVERTISEMENT

‘ಆಹಾರ್ ಪಾರ್ಕ್’ ಸ್ಥಾಪನೆಗೆ ಕ್ರಮ: ಶಿವಕುಮಾರ ಉದಾಸಿ ಭರವಸೆ

ಜಿಲ್ಲೆಗೆ ₹ 3 ಸಾವಿರ ಕೋಟಿ ಅನುದಾನ: ಸಂಸದ ಶಿವಕುಮಾರ ಉದಾಸಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:27 IST
Last Updated 4 ಜೂನ್ 2020, 16:27 IST
ಶಿವಕುಮಾರ ಉದಾಸಿ, ಸಂಸದ 
ಶಿವಕುಮಾರ ಉದಾಸಿ, ಸಂಸದ    

ಹಾವೇರಿ:ಕೃಷಿ ಪ್ರಧಾನ ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ‘ಆಹಾರ ಪಾರ್ಕ್’ ಸ್ಥಾಪನೆಗೆ ಕ್ರಮವಹಿಸಲಾಗುವುದು. ಇಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ತಂದುಕೊಡುವ ನಿಟ್ಟಿನಲ್ಲಿ ಸ್ಥಳೀಯ ರೈತರಿಗೆ ನೆರವಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ₹3 ಸಾವಿರ ಕೋಟಿಗೂ ಅಧಿಕ ಹಣ ಒಂದೇ ವರ್ಷದಲ್ಲಿ ವಿವಿಧ ಯೋಜನೆಗೆ ಮಂಜೂರಾಗಿದೆ. ಈ ಪೈಕಿ ₹2.25 ಕೋಟಿ ನೇರವಾಗಿ ಹಾವೇರಿ ಜಿಲ್ಲೆಗೆ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಕಾಯ್ದೆಯಿಂದ ತೊಂದರೆ ಇಲ್ಲ: ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ. ಇದರಿಂದ ರೈತರ ಕೃಷಿ ಆದಾಯ ದ್ವಿಗುಣಗೊಳ್ಳಲಿದೆ. ರೈತರು ತಮ್ಮ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದು. ಇದರಿಂದ ಸ್ಪರ್ಧಾತ್ಮಕ ಬೆಲೆ ಪಡೆಯಬಹುದಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವ ಅವಕಾಶವಿದೆ. ಎಪಿಎಂಸಿ ಆ್ಯಕ್ಟ್ ತಿದ್ದುಪಡಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಮುಚ್ಚುವುದಿಲ್ಲ ಎಂದು ತಿಳಿಸಿದರು.

ADVERTISEMENT

ರೈಲು ಮಾರ್ಗ ಅನುಷ್ಠಾನ: ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಹಾವೇರಿ- ಗದಗ ಜಿಲ್ಲೆಗಳಿಗ ಗರಿಷ್ಠ ಪ್ರಮಾಣದ ಆರ್ಥಿಕ ನೆರವು ಹರಿದು ಬಂದಿದೆ. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಶಿಕಾರಿಪುರ, ಶಿವಮೊಗ್ಗ ಸಂಪರ್ಕಿಸುವ 92 ಕಿ.ಮೀ. ಉದ್ದದ ನೂತನ ರೈಲು ಮಾರ್ಗ ಅನುಷ್ಠಾನಕ್ಕೆ ₹1700 ಕೋಟಿ ಮಂಜೂರಾತಿ ದೊರೆತಿದೆ. ಹಾವೇರಿ ನೂತನ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಕ್ಕೆ ₹600 ಕೋಟಿ ಮಂಜೂರಾತಿ ದೊರೆತಿದೆ. ₹46 ಕೋಟಿ ಬಿಡುಗಡೆಯಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಹಾವೇರಿ ಜಿಲ್ಲೆಯ 245 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹159.25 ಕೋಟಿ ಹಾಗೂ ಗದಗ ಜಿಲ್ಲೆಯ 160 ಕಿ.ಮೀ. ರಸ್ತೆ ಅಭಿವೃದ್ಧಿ ₹109.85 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿ: ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಾವೇರಿ ಜಿಲ್ಲೆಯಲ್ಲಿ ₹20.32 ಕೋಟಿ ಖರ್ಚು ಮಾಡಲಾಗಿದೆ. 7.25 ಲಕ್ಷ ಮಾನವ ದಿನಗಳನ್ನು ಸೃಜಿಸಿ ಜನರಿಗೆ ಉದ್ಯೋಗ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ 5.96 ಲಕ್ಷ ಮಾನವ ದಿನಗಳನ್ನು ಸೃಜಿಸಿ ₹13.74 ಕೋಟಿಯನ್ನು ಉದ್ಯೋಗಖಾತ್ರಿಯಡಿ ವೆಚ್ಚ ಮಾಡಲಾಗಿದೆ. ಕೃಷಿ ಚಟುವಟಿಕೆಗಳಿಗಾಗಿಯೇ ₹4.34 ಕೋಟಿ ಬಳಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮೀಣ ಉದ್ಯೋಗ ಸೃಜನೆ ಹೆಚ್ಚು ಮಾಡಲು ನಿಗದಿತ ಅನುದಾನ ₹61,500 ಕೋಟಿ ಅನುದಾನಕ್ಕೆ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ ₹40 ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು ಉದ್ಯೋಗಖಾತ್ರಿ ಯೋಜನೆಗೆ ಒದಗಿಸಿದೆ. ಮನರೇಗಾ ಮಾನವ ದಿನಗಳನ್ನು 50 ರಿಂದ 75 ದಿನಗಳವರೆಗೆ ಹೆಚ್ಚಿಸುವ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ನೆಹರು ಓಲೇಕಾರ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.