ADVERTISEMENT

ಹಾನಗಲ್: ಕರಡಿಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ

ತಂತಿ ಬೇಲಿಯಲ್ಲಿ ಸಿಲುಕಿ ಒದ್ದಾಟ: ಮುಂಡಗೋಡ ಅರಣ್ಯಕ್ಕೆ ಸುರಕ್ಷಿತ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 15:02 IST
Last Updated 29 ಅಕ್ಟೋಬರ್ 2020, 15:02 IST
ಹಾನಗಲ್ ತಾಲ್ಲೂಕಿನ ಶಿರಗೋಡ ಗ್ರಾಮ ವ್ಯಾಪ್ತಿಯ ಮಾವಿನತೋಟ ಬದುವಿಗೆ ಅಳವಡಿಸಿದ್ದ ತಂತಿಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದರು
ಹಾನಗಲ್ ತಾಲ್ಲೂಕಿನ ಶಿರಗೋಡ ಗ್ರಾಮ ವ್ಯಾಪ್ತಿಯ ಮಾವಿನತೋಟ ಬದುವಿಗೆ ಅಳವಡಿಸಿದ್ದ ತಂತಿಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದರು   

ಹಾನಗಲ್:ತಾಲ್ಲೂಕಿನ ಶಿರಗೋಡ ಗ್ರಾಮದ ಮಾವಿನತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಯಲ್ಲಿ ಸಿಲುಕಿಕೊಂಡು ಪೇಚಾಡುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಸುರಕ್ಷಿತವಾಗಿ ಪಾರು ಮಾಡಿದೆ.

ಗ್ರಾಮದ ಪುಟ್ಟಪ್ಪ ಮಡಿವಾಳರ ಮತ್ತು ಲೋಕೇಶ ಚಲವಾದಿ ಎಂಬ ರೈತರ ಮಾವಿನತೋಟ ಮತ್ತು ಭತ್ತದ ಗದ್ದೆ ಮಧ್ಯದ ಬದುವಿನಲ್ಲಿ ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.

ಗುರುವಾರ ನಸುಕಿನ ವೇಳೆಯಲ್ಲಿ ಗ್ರಾಮದ ಹೊರಭಾಗದಲ್ಲಿ ಕರಡಿ ಹೂಂಕಾರ ಕೇಳಿದ ಗ್ರಾಮಸ್ಥರು ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ತಂತಿಬೇಲಿಯಲ್ಲಿ ಕಾಲು ಸಿಲುಕಿಸಿಕೊಂಡು ಒದ್ದಾಡುತ್ತಿದ್ದ ಕರಡಿ ಗ್ರಾಮಸ್ಥರಿಗೆ ಗುಟುರು ಹಾಕಿ ಬೆದರಿಸಿದೆ. ಶಿರಗೋಡ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಗ್ರಾಮವಾಗಿದ್ದು, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳು ವಾಸಿಸುತ್ತವೆ.

ADVERTISEMENT

ಬೋನು ವ್ಯವಸ್ಥೆ:

ಸಮಯಪ್ರಜ್ಞೆ ಮೆರೆದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ಪಟ್ಟರೂ ಫಲಪ್ರದವಾಗಲಿಲ್ಲ.ಹೀಗಾಗಿ ಗದಗ ಮೃಗಾಲಯದ ಸಹಾಯಕ ನಿರ್ದೇಶಕ ನಿಖಿಲ್‌ ಕುಲಕರ್ಣಿ ಮತ್ತು ಹಾನಗಲ್‌ನ ಪಶು ವೈದ್ಯಾಧಿಕಾರಿ ಡಾ.ಗಿರೀಶ ರಡ್ಡೇರ ಅವರನ್ನು ಸ್ಥಳಕ್ಕೆ ತಕ್ಷಣ ಕರೆಸಿಕೊಳ್ಳಲಾಯಿತು. ಜತೆಗೆ ಕರಡಿ ಸ್ಥಳಾಂತರಕ್ಕೆ ಬೋನು ವ್ಯವಸ್ಥೆ ಕೂಡ ಮಾಡಲಾಯಿತು.

ಕರಡಿ ಘಟನೆಯ ವಿಷಯ ತಿಳಿದ ಗ್ರಾಮಸ್ಥರು ತಂಡೋಪ ತಂಡವಾಗಿ ಸೇರಿದರು. ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದರು. ಕೆಲವು ಯುವಕರು ಮರಗಳನ್ನು ಏರಿ ಕುಳಿತರು. ಜನರ ಕೂಗಿಗೆ ಪ್ರತಿಕ್ರಿಯಿಸುತ್ತಿದ್ದ ಕರಡಿ ಜೋರಾಗಿಯೇ ಗುಟುರು ಹಾಕುತ್ತಿತ್ತು.

ಕರಡಿಗೆ ಚಿಕಿತ್ಸೆ:

‘ಕರಡಿಗೆ ಅರಿವಳಿಕೆ ಮದ್ದು ನೀಡಿ, ಬಲೆ ಬೀಸಿದ ಬಳಿಕ ತಂತಿಯಿಂದ ಕರಡಿಯನ್ನು ಬಿಡಿಸಲಾಯಿತು. ಸಣ್ಣಪುಟ್ಟ ಗಾಯಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಮಧ್ಯಾಹ್ನದ ಹೊತ್ತಿಗೆ ಪ್ರಜ್ಞೆ ಮರುಕಳಿಸಿದ ಬಳಿಕ ಕರಡಿಯ ಆರೋಗ್ಯ ಸ್ಥಿತಿಯ ಪರೀಕ್ಷೆ ನಡೆಸಲಾಗಿದೆ. ನಂತರ ಮುಂಡಗೋಡ ಭಾಗದ ದಟ್ಟ ಅರಣ್ಯಕ್ಕೆ ಕರಡಿಯನ್ನು ಸುರಕ್ಷಿತವಾಗಿ ಬಿಡಲಾಗಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಎಸ್.ಎಂ.ತಳವಾರ, ಪರಸಪ್ಪ, ಶ್ರೀಶೈಲ
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.