ADVERTISEMENT

ಹಾವೇರಿ: ಎಸ್‌ಎನ್‌ಕ್ಯೂ ಕೋಟಾದಲ್ಲೂ ವಂಚನೆ!

ಬೋಧನಾ ಶುಲ್ಕ ಉಚಿತವಿದ್ದರೂ ₹15 ಸಾವಿರ ಶುಲ್ಕ ವಸೂಲಿ: ಆರೋಪ

ಸಿದ್ದು ಆರ್.ಜಿ.ಹಳ್ಳಿ
Published 22 ಜೂನ್ 2022, 19:30 IST
Last Updated 22 ಜೂನ್ 2022, 19:30 IST
ಹಾವೇರಿ ತಾಲ್ಲೂಕು ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಡದ ಹೊರನೋಟ  –ಪ್ರಜಾವಾಣಿ ಚಿತ್ರ 
ಹಾವೇರಿ ತಾಲ್ಲೂಕು ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಡದ ಹೊರನೋಟ  –ಪ್ರಜಾವಾಣಿ ಚಿತ್ರ    

ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪದ ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೂಪರ್‌ ನ್ಯೂಮರರಿ ಕೋಟಾದಡಿ (SNQ) ಪ್ರವೇಶಾತಿ ಪಡೆದ ಬಡ ವಿದ್ಯಾರ್ಥಿಗಳಿಂದಲೂ ತಲಾ ₹15 ಸಾವಿರ ಬೋಧನಾ ಶುಲ್ಕವನ್ನು ಅಕ್ರಮವಾಗಿ ಕಟ್ಟಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಆರ್ಥಿಕವಾಗಿ ದುರ್ಬಲರಾಗಿರುವ (ವಾರ್ಷಿಕ ₹6 ಲಕ್ಷಕ್ಕಿಂತ ಕಡಿಮೆ ಆದಾಯವಿರುವ) ರ‍್ಯಾಂಕಿಂಗ್‌ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಓದಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಎಸ್‌ಎನ್‌ಕ್ಯೂ ಸೀಟುಗಳನ್ನು ರಾಜ್ಯದಾದ್ಯಂತ ಇರುವ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಹಂಚಿಕೆ ಮಾಡುತ್ತದೆ.

ಈ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿ ನಾಲ್ಕು ವರ್ಷ ನಿಗದಿತ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಪೂರೈಸಬೇಕು. ಮಧ್ಯಂತರದಲ್ಲಿ ಕಾಲೇಜು ಮತ್ತು ಕೋರ್ಸ್ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಹಾವೇರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ಹಾಗೂ ಕಂಪ್ಯೂಟರ್‌ ಸೈನ್ಸ್‌ ಈ ನಾಲ್ಕು ವಿಭಾಗಗಳಲ್ಲಿ 48 ಎಸ್‌ಎನ್‌ಕ್ಯೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ADVERTISEMENT

ಅಕ್ರಮವಾಗಿ ಶುಲ್ಕ ವಸೂಲಿ:

‘ಎಸ್‌ಎನ್‌ಕ್ಯೂ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಂದರ್ಭ ₹2070 ಪ್ರವೇಶ ಶುಲ್ಕವನ್ನು ಮಾತ್ರ ಕಟ್ಟಿಸಿಕೊಳ್ಳಬೇಕು. ಬೋಧನಾ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ, ಇತರ ವಿದ್ಯಾರ್ಥಿಗಳಂತೆ ನೀವೂ ಬೋಧನಾ ಶುಲ್ಕ ₹15 ಸಾವಿರ ಕಟ್ಟಲೇಬೇಕು ಎಂದು ಕಚೇರಿ ಸಿಬ್ಬಂದಿ ಅಕ್ರಮವಾಗಿ ನಮ್ಮಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಈ ಹಣವನ್ನು ನಮಗೆ ವಾಪಸ್‌ ಕೊಡಿಸಿ’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಅಡ್ಮಿಶನ್‌ ಸಂದರ್ಭದಲ್ಲಿ ಬೋಧನಾ ಶುಲ್ಕವನ್ನು ಕಟ್ಟಲು ಸಾಧ್ಯವಾಗದವರಿಗೆ ಸ್ಕಾಲರ್‌ಶಿಪ್‌ ಬಂದಾಗ ಬೋಧನಾ ಶುಲ್ಕ ₹15 ಸಾವಿರ ಮುರಿದುಕೊಂಡು, ಉಳಿದ ಹಣವನ್ನು ಮಾತ್ರ ವಿದ್ಯಾರ್ಥಿಗೆ ನೀಡಿದ್ದಾರೆ. ಬಡವಿದ್ಯಾರ್ಥಿಗಳಿಗೆ ಸರ್ಕಾರ ಕಡಿಮೆ ಶುಲ್ಕದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಟ್ಟರೂ, ಈ ಕಾಲೇಜಿನ ಧನದಾಹಿ ಸಿಬ್ಬಂದಿ ನಮ್ಮಿಂದ ಹಣ ವಸೂಲಿ ಮಾಡಿದ್ದಾರೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

₹6 ಲಕ್ಷ ವಂಚನೆ ಆರೋಪ

ಪ್ರತಿವರ್ಷ ಸುಮಾರು 40 ವಿದ್ಯಾರ್ಥಿಗಳಿಂದ ತಲಾ ₹15 ಸಾವಿರದಂತೆ ₹6 ಲಕ್ಷವನ್ನು, ಮೂರ್ನಾಲ್ಕು ವರ್ಷಗಳಿಂದ ಅಕ್ರಮವಾಗಿ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಪ್ರಾಂಶುಪಾಲ ಡಾ.ಜಗದೀಶ ಕೋರಿ ಅವರಿಗೆ ಮನವಿ ಸಲ್ಲಿಸಿ, ನಮ್ಮಿಂದ ಅಕ್ರಮವಾಗಿ ಕಟ್ಟಿಸಿಕೊಂಡ ಹಣವನ್ನು ಹಿಂದಿರುಗಿಸುವಂತೆ ಕೋರಿದ್ದೇವೆ. ಅವರು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ತಿಳಿಸಿದರು.

‘ಸ್ಕಾಲರ್‌ಶಿಪ್‌ ಮತ್ತು ಶೈಕ್ಷಣಿಕ ಸಾಲ ಸೌಲಭ್ಯಗಳು ನಮಗೆ ಓದಲು ನೆರವಾಗುತ್ತವೆ. ಇದನ್ನು ನಂಬಿಕೊಂಡು ಎಂಜಿನಿಯರಿಂಗ್‌ ಮಾಡಲು ಬಂದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಸಿಗುತ್ತಿಲ್ಲ, ಶೈಕ್ಷಣಿಕ ಸಾಲವೂ ದೊರೆತಿಲ್ಲ. ಸಾಲ ಮಾಡಿ ಶುಲ್ಕ ಕಟ್ಟಿದ್ದೇವೆ. ನಮ್ಮಂಥ ಬಡವರು ಓದು ಮುಂದುವರಿಸುವುದೇ ಕಷ್ಟವಾಗಿದೆ’ ಎಂದು ಕಾಲೇಜು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

₹15 ಸಾವಿರ ಯಾರ ಜೇಬಿಗೆ?

ವಿದ್ಯಾರ್ಥಿಗೆ ನೀಡಿರುವ ರಸೀತಿಯಲ್ಲಿ ಪ್ರವೇಶ ಶುಲ್ಕ₹2070 ಮತ್ತು ಬೋಧನಾ ಶುಲ್ಕ ₹15 ಸಾವಿರ ಸೇರಿ ಒಟ್ಟು ₹17,070 ಶುಲ್ಕ ಕಟ್ಟಿಸಿಕೊಂಡಿರುವುದನ್ನು ನಮೂದಿಸಲಾಗಿದೆ. ಆದರೆ, ಕಾಲೇಜು ರಸೀತಿಯಲ್ಲಿ ಕೇವಲ ಪ್ರವೇಶ ಶುಲ್ಕ ₹2070 ಮಾತ್ರ ನಮೂದಿಸಲಾಗಿದೆ. ಉಳಿದ ₹15 ಸಾವಿರ ಯಾರ ಜೇಬಿಗೆ ಹೋಯಿತು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

**

ಎಸ್‌ಎನ್‌ಕ್ಯೂ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಕಟ್ಟಿಸಿಕೊಂಡಿರುವ ದೂರು ಬಂದಿದೆ. ದಾಖಲೆಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ
– ಡಾ.ಜಗದೀಶ ಕೋರಿ, ಪ್ರಾಂಶುಪಾಲ, ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.