ADVERTISEMENT

ಸ್ವಾತಂತ್ರ್ಯಸೇನಾನಿ ಮೈಲಾರರ ಮಹದೇವರ ದೇಶಪ್ರೇಮ ಅವಿಸ್ಮರಣೀಯ

ಸ್ವಾತಂತ್ರ್ಯಸೇನಾನಿಯ ಹುತಾತ್ಮ ದಿನ ಇಂದು

ಪ್ರಮೀಳಾ ಹುನಗುಂದ
Published 31 ಮಾರ್ಚ್ 2020, 19:30 IST
Last Updated 31 ಮಾರ್ಚ್ 2020, 19:30 IST
ಹುತಾತ್ಮ ಮಹದೇವ ಮೈಲಾರ
ಹುತಾತ್ಮ ಮಹದೇವ ಮೈಲಾರ   

ಬ್ಯಾಡಗಿ: ವಸಾಹತುಶಾಹಿ ವಿರುದ್ಧ ದೇಶದ ತುಂಬಾ ವಿರೋಧಿ ಅಲೆ ಎದ್ದಿತ್ತು. ಆಗ ಸುಭಾಷ್‌ಚಂದ್ರಭೋಸ್, ಭಗತ್‌ಸಿಂಗ್‌, ಲಾಲಾ ಲಜಪತ್‌ರಾಯ್ ಹಾಗೂ ಮಹಾತ್ಮ ಗಾಂಧೀಜಿಯವರಂತಹ ನೇತಾರರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಸಹ ತೀವ್ರಗೊಂಡಿತ್ತು.

ಬ್ರಿಟಿಷರ ದಬ್ಬಾಳಿಕೆ ಕುರಿತು ಹರ್ಡೆಕರ ಮಂಜಪ್ಪನವರು ಜನರಿಗೆ ಮನವರಿಕೆ ಮಾಡುವಾಗ ಅವರ ಪ್ರವಚನದಿಂದ ಪ್ರಭಾವಿತರಾಗಿ 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಮಹದೇವ ಮೈಲಾರರು 1943ನೇ ಏ.1ರಂದು ಹುತಾತ್ಮರಾದರು.

ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ಮಧ್ಯಮ ವರ್ಗದ ರೈತ ಕುಟುಂಬದ ಮಾರ್ತಂಡಪ್ಪ ಹಾಗೂ ಬಸಮ್ಮ ಅವರ ಪುತ್ರನಾಗಿ 1911ರಲ್ಲಿ ಮಹದೇವ ಮೈಲಾರರು ಜನಿಸಿದರು.

ADVERTISEMENT

ಓದಿ ಅಧಿಕಾರಿಯಾಗಬೇಕು ಎನ್ನುವ ಮಹದಾಸೆಯಿಂದ ಹಂಸಭಾವಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದ ಅವರಿಗೆ ಶಿಕ್ಷಕರಾದ ಟಿ.ಆರ್‌.ನೇಶ್ವಿ, ಕೆ.ಎಫ್‌.ಪಾಟೀಲ ಹಾಗೂ ಸರ್ಧಾರ ವೀರನಗೌಡ್ರ ಸ್ವಾತಂತ್ರ್ಯ ಕುರಿತು ಮಾರ್ಗದರ್ಶನ ನೀಡಿದ್ದರು.

ಆಗ ಶಿಕ್ಷಣವನ್ನು ಮೊಟಕುಗೊಳಿಸಿ ರಾಷ್ಟ್ರೀಯ ಚಳವಳಿಯಲ್ಲಿ ಧುಮುಕಿದರು. ಊರೂರು ಸುತ್ತಿ ಸ್ವದೇಶಿ ಚಳವಳಿಯನ್ನು ಚುರುಕುಗೊಳಿಸಿದರು. ವಿದೇಶಿ ವಸ್ತುಗಳ ಬಹಿಷ್ಕಾರದ ಪ್ರಚಾರ, ಖಾದಿ ಉತ್ಪಾದನೆ ಹರಿಜನೋದ್ಧಾರ ಮುಂತಾದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

1930ರಲ್ಲಿ ಮಹಾತ್ಮ ಗಾಂದೀಜಿ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭಗೊಂಡಾಗ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಮಹದೇವ ಮೈಲಾರರು ಭಾಗವಹಿಸಿದ್ದರು. ಅಲ್ಲಿಂದ ಹಿಂತಿರುಗಿದ ಬಳಿಕ ಹೊಸರಿತ್ತಿಯನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡರು.

ಪತ್ನಿ ಸಿದ್ದಮ್ಮರೊಂದಿಗೆ ಸಾಬರಮತಿ ಆಶ್ರಮದಲ್ಲಿ ತರಬೇತಿ ಪಡೆದ ಅವರು 1937ರಲ್ಲಿ ಹಾವೇರಿ ತಾಲ್ಲೂಕಿನ ಕೊರಡೂರು ಗ್ರಾಮದಲ್ಲಿ ಊರಿನವರ ಸಹಕಾರದಿಂದ ಸತಿಪತಿಗಳಿಬ್ಬರೂ ‘ಸೇವಾಶ್ರಮ‘ ಆರಂಭಿಸಿದರು.

1941ರಲ್ಲಿ ದಂಪತಿಗಳಿಬ್ಬರೂ ಸೆರೆಮನೆವಾಸ ಅನುಭವಿಸಿದರು. ಬಳಿಕ ನಡೆದ ಚಲೇಜಾವ್‌ ಚಳವಳಿಯಲ್ಲಿ ಮಹದೇವ ಮೈಲಾರರ ನೇತೃತ್ವದ ತಂಡ ಧಾರವಾಡ ದಕ್ಷಿಣ ಭಾಗದ ಪ್ರಮುಖ ಚಾವಡಿ, ರೈಲು ನಿಲ್ದಾಣ, ಅಂಚೆ ಚೀಲಗಳನ್ನು ಸುಡುವ ಮೂಲಕ ಪೊಲೀಸರನ್ನು ನಿಶಸ್ತ್ರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.

1943ರಲ್ಲಿ ಹೊಸರಿತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಟ್ಟಿದ್ದ ಕಂದಾಯ ಹಣದ ಲೂಟಿಗೆ ಅವರ ತಂಡ ಮುಂದಾದಾಗ ಪೊಲೀಸರ ಗುಂಡಿಗೆ ಮಹದೇವ ಮೈಲಾರ, ಕೂಗನೂರಿನ ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳರ ಬಲಿಯಾಗಿ ವೀರ ಮರಣ ಹೊಂದಿದರು.

77 ವರ್ಷ ಸಂದರೂ ಮಹದೇವ ಮೈಲಾರರ ಬದುಕು ದೇಶಪ್ರೇಮ ಇತಿಹಾಸದಲ್ಲಿ ಅವಿಸ್ಮರಣೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.