ADVERTISEMENT

ಹಾವೇರಿ: ಗಳಗನಾಥ–ರಾಜಪುರೋಹಿತರು ಸಾಹಿತ್ಯದ ದಿಗ್ಗಜರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:18 IST
Last Updated 12 ಅಕ್ಟೋಬರ್ 2025, 6:18 IST
ಹಾವೇರಿ ತಾಲ್ಲೂಕಿನ ಕಳ್ಳಿಹಾಳದಲ್ಲಿರುವ ಎಸ್.ಸಿ.–ಎಸ್.ಟಿ ವಸತಿಯುತ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಿ.ಟಿ. ಪಾಟೀಲ ಉದ್ಘಾಟಿಸಿದರು
ಹಾವೇರಿ ತಾಲ್ಲೂಕಿನ ಕಳ್ಳಿಹಾಳದಲ್ಲಿರುವ ಎಸ್.ಸಿ.–ಎಸ್.ಟಿ ವಸತಿಯುತ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಿ.ಟಿ. ಪಾಟೀಲ ಉದ್ಘಾಟಿಸಿದರು   

ಹಾವೇರಿ: ‘ಕನ್ನಡದ ಕಾದಂಬರಿ ಪಿತಾಮಹ ಗಳಗನಾಥರು ಹಾಗೂ ರಾಜಪುರೋಹಿತರು, ಕನ್ನಡ ಸಾಹಿತ್ಯದ ದಿಗ್ಗಜರು. ಕನ್ನಡದ ಪರಿಸ್ಥಿತಿ ಶೋಚನೀಯವಾಗಿದ್ದ ಕಾಲದಲ್ಲಿ ನಾಡು–ನುಡಿಗಾಗಿ ದುಡಿದ ಸಾಹಿತಿ ಹಾಗೂ ಸಂಶೋಧಕರ ಹೆಸರುಗಳಲ್ಲಿ ಅವರಿಬ್ಬರ ಹೆಸರು ಪ್ರಮುಖವಾದದ್ದು’ ಎಂದು ಪ್ರಾಂಶುಪಾಲ ಡಿ.ಟಿ.ಪಾಟೀಲ ಹೇಳಿದರು.

ತಾಲ್ಲೂಕಿನ ಕಳ್ಳಿಹಾಳದಲ್ಲಿರುವ ಎಸ್.ಸಿ.–ಎಸ್.ಟಿ ವಸತಿಯುತ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಳಗನಾಥರು ಮತ್ತು ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನದಿಂದ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕದಾಸರು, ಶಿಶುನಾಳ ಶರೀಫರು ಸೇರಿ ಮುಂತಾದವರು ಈ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಸಂತರ, ಶರಣರ ದಾರ್ಶನಿಕ ಚರಿತ್ರೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಾಹಿತ್ಯ ಓದುವುದನ್ನು ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಕಾಂತೇಶ ರಡ್ಡಿ ಗೊಡಿಹಾಳ ಮಾತನಾಡಿ, ‘ಕನ್ನಡ ಕಾದಂಬರಿಯ ಉನ್ನತ ಸೌಧದ ತಳಪಾಯ ಹಾಕಿದವರು ಗಳಗನಾಥರು. ಅವರು ಕನ್ನಡ ಕಾದಂಬರಿಯ ಪಿತಾಮಹ. ಇತಿಹಾಸ ಸಂಶೋಧಕ ರಾಜಪುರೋಹಿತರು ಇಂದಿನ ಸಂಶೋಧಕರಿಗೆ ಪ್ರೇರಣೆ ಹಾಗೂ ಸ್ಪೂರ್ತಿಯಾಗುತ್ತಾರೆ. ಈ ಮಹನೀಯರು ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದವರೆಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದು ತಿಳಿಸಿದರು.

ರಟ್ಟೀಹಳ್ಳಿ ಪ್ರಿಯದರ್ಶಿನಿ ಪದವಿ ಕಾಲೇಜಿನ ಉಪನ್ಯಾಸಕ ಚಾಮರಾಜ ಕಮ್ಮಾರ ಮಾತನಾಡಿ, ‘ಶಿಲಾ ಶಾಸನಗಳು ಹಾಗೂ ಸ್ಮಾರಕಗಳು, ಹಾವೇರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕಂಡುಬಂದಿವೆ. ಶಾಸನಗಳು ಎಂದರೆ, ಪ್ರಾಚೀನ ಕಾಲದ ಜನರನ್ನು ಸಮಗ್ರ ದೃಷ್ಟಿಯಿಂದ ನೋಡುವುದಾಗಿದೆ. ಶಾಸನಗಳ ಹಾಗೂ ಸ್ಮಾರಕಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಅವುಗಳ ರಕ್ಷಣೆ ನಮ್ಮೆಲ್ಲರ ಜಬಾಬ್ದಾರಿ. ವಿದ್ಯಾರ್ಥಿಗಳು ಇತಿಹಾಸಕಾರರ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು’ ಎಂದರು.

ಪ್ರತಿಷ್ಠಾನದ ಸದಸ್ಯರಾದ ವೆಂಕಟೇಶ ಗಳಗನಾಥ, ಹನುಮಂತಗೌಡ ಗೊಲ್ಲರ, ಪ್ರಮೋದ ನಲವಾಗಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.