ADVERTISEMENT

ಹಾವೇರಿ| ಗಾಂಧೀಜಿ ಸಂದೇಶ ಸಾರಿದ ‘ಗಾಂಧಿ ಗಿಡ’

ಎನ್‌ಎಸ್‌ಎಸ್ ನಾಯಕತ್ವ ತರಬೇತಿ ಶಿಬಿರ; ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:19 IST
Last Updated 6 ಡಿಸೆಂಬರ್ 2025, 2:19 IST
ಹಾವೇರಿ ಗುದ್ಲೆಪ್ಪ ಹಳ್ಳಿಕೇರಿ (ಜಿ.ಎಚ್‌.) ಮಹಾವಿದ್ಯಾಲಯದಲ್ಲಿ ‘ಗಾಂಧಿ ವಿಚಾರ ಪ್ರಣೀತ ರಾಜ್ಯಮಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರ’ದಲ್ಲಿ ಶುಕ್ರವಾರ ‘ಗಾಂಧಿ ಗಿಡ’ ನಾಟಕ ಪ್ರದರ್ಶಿಸಲಾಯಿತು
ಹಾವೇರಿ ಗುದ್ಲೆಪ್ಪ ಹಳ್ಳಿಕೇರಿ (ಜಿ.ಎಚ್‌.) ಮಹಾವಿದ್ಯಾಲಯದಲ್ಲಿ ‘ಗಾಂಧಿ ವಿಚಾರ ಪ್ರಣೀತ ರಾಜ್ಯಮಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರ’ದಲ್ಲಿ ಶುಕ್ರವಾರ ‘ಗಾಂಧಿ ಗಿಡ’ ನಾಟಕ ಪ್ರದರ್ಶಿಸಲಾಯಿತು   

ಹಾವೇರಿ: ಇಲ್ಲಿಯ ಗುದ್ಲೆಪ್ಪ ಹಳ್ಳಿಕೇರಿ (ಜಿ.ಎಚ್‌.) ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ‘ಗಾಂಧಿ ವಿಚಾರ ಪ್ರಣೀತ ರಾಜ್ಯಮಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರ’ದಲ್ಲಿ ಶುಕ್ರವಾರ ‘ಗಾಂಧಿ ಗಿಡ’ ನಾಟಕ ಪ್ರದರ್ಶಿಸಲಾಯಿತು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಹಾವೇರಿ ಕಲಾ ಬಳಗದಿಂದ ನಾಟಕ ಪ್ರದರ್ಶಿಸಿದರು. ನಾಟಕ ಬರೆದಿದ್ದ ಸಾಹಿತಿ ಸತೀಶ ಕುಲಕರ್ಣಿ ಅವರೇ ನಿರ್ದೇಶನ ಮಾಡಿದರು.

ಗಾಂಧೀಜಿ ಅವರ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಗಳ ಸಂದೇಶವನ್ನು ಸಾರುವಲ್ಲಿ ನಾಟಕ ಯಶಸ್ವಿಯಾಯಿತು. ಹಳ್ಳಿಯೊಂದಕ್ಕೆ ಪಾದಯಾತ್ರೆಯ ಮೂಲಕ ಬರುವ ಗಾಂಧೀಜಿಯವರು ಗಿಡವೊಂದನ್ನು ನೆಡುತ್ತಾರೆ. ಅದು ಬೆಳೆದಂತೆ ಅದರ ಫಲಗಳನ್ನು ಬೇರೆ ಬೇರೆ ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುತ್ತ, ಗಾಂಧೀಜಿ ಗಿಡಕ್ಕೆ ಕಾವಲು ಮತ್ತು ಬೇಲಿಯನ್ನು ಹಾಕುತ್ತಾರೆ. ಕೊನೆಯಲ್ಲಿ ಜನ ಸಾಮಾನ್ಯರು, ಎಲ್ಲರನ್ನೂ ವಿರೋಧಿಸಿ ಗಾಂಧಿ ಗಿಡವನ್ನು ಮುಕ್ತಗೊಳಿಸುತ್ತಾರೆ ಎಂಬುದು ನಾಟಕದ ಆಶಯವಾಗಿತ್ತು.

ADVERTISEMENT

ಹಾವೇರಿ ನಗರದ 30ಕ್ಕೂ ಹೆಚ್ಚು ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದರು. ಗಾಂಧಿ ಪಾತ್ರಧಾರಿ ಕೆ.ಎನ್. ಜಾನ್ವೇಕರ ಅವರ ಅಭಿನಯ ಉತ್ತಮವಾಗಿತ್ತು. ಸರ್ವಶ್ರೀ ತಿಪ್ಪೇಸ್ವಾಮಿ, ಮುತ್ತುರಾಜ ಹಿರೇಮಠ, ಬಸವರಾಜ ಎಸ್., ಚೈತ್ರಾ ಕೊರವರ, ಧನುಶ್, ಅನಿತಾ ಮಂಜುನಾಥ, ನೇತ್ರಾ ಅಂಗಡಿ, ಅಂಬಿಕಾ ಹಂಚಾಟೆ, ರೇಣುಕಾ ಗುಡಿಮನಿ, ಅರುಣ ನಾಗವತ್, ರಾಜೇಂದ್ರ ಹೆಗಡೆ, ಸಿ.ಎಸ್. ಚಿಕ್ಕಮಠ, ಈರಣ್ಣ ಬೆಳವಡಿ ಮುಂತಾದವರು ಪಾತ್ರ ನಿರ್ವಹಿಸಿದರು.

‘ಸಾರೇ ಜಹಾ ಸೇ ಅಚ್ಛಾ’, ‘ರಘುಪತಿ ರಾಘವ ರಾಜಾರಾಮ್’, ‘ಯಾರಿಗೆ ಬಂತು ಎಲ್ಲಿಗೆ ಬಂತು’, ‘ಕಟ್ಟತೇವ ನಾವು ಕಟ್ಟತೇವ’ ಎಂಬ ಗೀತೆಗಳು ನಾಟಕಕ್ಕೆ ಕಳೆ ತಂದವು. ನಾಟಕ ಪ್ರದರ್ಶನವನ್ನು ರಮೇಶ ತೆವರಿ ಉದ್ಘಾಟಿಸಿದ್ದರು. ಬಸವರಾಜ ಮಾಸೂರ, ಶಮಂತಕುಮಾರ ಕೆ.ಎಸ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.