ADVERTISEMENT

ಗಾಂಧೀಜಿ ಶಾಂತಿ, ಸಮತೆಯ ಸಂಕೇತ: ಸತೀಶ ಕುಲಕರ್ಣಿ

ಹುತಾತ್ಮ ದಿನದ ಅಂಗವಾಗಿ ಎಸ್‌ಎಫ್‌ಐನಿಂದ ‘ಸಾಮರಸ್ಯ ನಡಿಗೆ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 15:20 IST
Last Updated 30 ಜನವರಿ 2023, 15:20 IST
ಹಾವೇರಿ ನಗರದಲ್ಲಿ ಸೋಮವಾರ ಹುತಾತ್ಮ ದಿನದ ಅಂಗವಾಗಿ ಗಾಂಧೀಜಿ ಪುತ್ಥಳಿಗೆ ಎಸ್‌ಎಫ್ಐ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು. ಸಾಹಿತಿ ಸತೀಶ ಕುಲಕರ್ಣಿ, ಪರಿಮಳಾ ಜೈನ್‌, ಬಸವರಾಜ ಭೋವಿ ಇದ್ದಾರೆ 
ಹಾವೇರಿ ನಗರದಲ್ಲಿ ಸೋಮವಾರ ಹುತಾತ್ಮ ದಿನದ ಅಂಗವಾಗಿ ಗಾಂಧೀಜಿ ಪುತ್ಥಳಿಗೆ ಎಸ್‌ಎಫ್ಐ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು. ಸಾಹಿತಿ ಸತೀಶ ಕುಲಕರ್ಣಿ, ಪರಿಮಳಾ ಜೈನ್‌, ಬಸವರಾಜ ಭೋವಿ ಇದ್ದಾರೆ    

ಹಾವೇರಿ: ‘ಶಾಂತಿಯ ಸಂಕೇತವಾಗಿ ಇಡೀ ವಿಶ್ವವನ್ನೇ ವ್ಯಾಪಿಸಿದ ದೊಡ್ಡ ನಾಯಕ, ತತ್ವಜ್ಞಾನಿಯಾಗಿದ್ದ ಗಾಂಧಿಯ ಹತ್ಯೆಯ ದಿನವನ್ನು ಸಾಮರಸ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಗಾಂಧಿ ವೃತ್ತದವರೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿ ಹುತಾತ್ಮ ದಿನದ ಅಂಗವಾಗಿ ಏರ್ಪಡಿಸಿದ ‘ಸಾಮರಸ್ಯ ನಡಿಗೆ’ ಕಾರ್ಯಕ್ರಮದಲ್ಲಿ ಹುತಾತ್ಮ ಗಾಂಧಿ ಅವರ ಪ್ರತಿಮೆಗೆ ಮಲಾರ್ಪಣೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ಗಾಂಧಿ ಶಾಂತಿಯ, ಸಮತೆಯ, ಸಾಮರಸ್ಯದ ಸಂಕೇತವಾಗಿದ್ದಾರೆ. ಗಾಂಧಿ ನಿನ್ನೆ, ಇವತ್ತು, ನಾಳೆಗೂ ದೊಡ್ಡ ಆದರ್ಶವಾಗಿದ್ದಾರೆ. ವಿದ್ಯಾರ್ಥಿ-ಯುವಜನರು ಗಾಂಧಿಯ ಚಿಂತನೆಗಳೊಂದಿಗೆ ಹೆಜ್ಜೆ ಹಾಕಬೇಕು ಎಂದರು.

ADVERTISEMENT

ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರದ ಪರಿಮಳಾ ಜೈನ್ ಮಾತನಾಡಿ, ಗಾಂಧೀಜಿ ಸತ್ಯ, ಸರಳತೆ, ಅಹಿಂಸೆಯ ಪ್ರತೀಕವಾಗಿ ಆದರ್ಶವಾಗಿದ್ದರು. ಕೋಮುವಾದ ಸಂಪೂರ್ಣ ನಾಶವಾಗಲಿ, ಸೌರ್ಹಾದದ ಬಾಳು ನಮ್ಮೆಲ್ಲರದಾಗಲಿ. ಅದು ವಿದ್ಯಾರ್ಥಿ ದೆಸೆಯಿಂದಲೇ ಪ್ರಾರಂಭವಾಗಲಿ ಎಂದರು.

ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ಸಂತತಿಗಳಿಂದ ಪಠ್ಯ ಪುಸ್ತಕ ಪರಿಷ್ಕರಣೆ ಒಪ್ಪುವುದಿಲ್ಲ. ದೇಶಕ್ಕಾಗಿ ಶ್ರಮಿಸಿದ, ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಸಂತತಿಗಳು ನಾವು. ಗಾಂಧಿ, ಭಗತ್‌‌ ಸಿಂಗ್‌‌, ಅಂಬೇಡ್ಕರ್, ಕುವೆಂಪು, ಮೈಲಾರ ಮಹದೇವಪ್ಪ ಸೇರಿದಂತೆ ಅನೇಕರ ವಿಚಾರಗಳು, ಚಿಂತನೆಗಳು ನಮಗೆ ಆದರ್ಶವಾಗಿವೆ ಎಂದರು.

ಡಿವೈಎಫ್ಐ ಮುಖಂಡರಾದ ನಾರಾಯಣ ಕಾಳೆ ಮಾತನಾಡಿದರು. ವಿದ್ಯಾರ್ಥಿ - ಯುವಜನರು ಗಾಂಧಿಯ ಮುಖವಾಡ ಹಾಕಿಕೊಂಡು ಸಾಮರಸ್ಯ ಸಂದೇಶ ಸಾರುವ ಘೋಷಣೆಗಳನ್ನು ಹಾಕುತ್ತಾ ‘ಸಾಮರಸ್ಯ ನಡಿಗೆಯಲ್ಲಿ’ ಹೆಜ್ಜೆ ಹಾಕಿದರು.

ಎಸ್‌ಎಫ್‌ಐ ಜಿಲ್ಲಾ ಮುಖಂಡರಾದ ಅರುಣ ಕಡಕೋಳ, ಗುಡ್ಡಪ್ಪ ಮಡಿವಾಳರ, ವಿವೇಕ್ ಫನಸೆ, ತಾಲ್ಲೂಕು ಕಾರ್ಯದರ್ಶಿ ಕಾವ್ಯಾ ಹನ್ನಗೊಡಿಮಠ, ಮುಖಂಡರಾದ ಅರ್ಜುನ ರಜಪೂತ, ನೇಹಲ್ ಖಾನ್‌ ಗಂಗಾವತಿ, ಪೂರ್ಣಿಮಾ ಡವಗಿ, ಪೂಜಾ ಎಲಿ, ಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.